ಒರಳೊನಕಿಯ ನಡುವಿನ ಸಿಹಿಧಾನ್ಯದಂತೆ,
ಖಣಿ ಗಾಣದ ನಡುವಿನ ತಿಲದಂತೆ,
ಅಗ್ನಿ ಕುಂಭದ ನಡುವಿನ ಜೀವಪಾಕದಂತೆ,
ತ್ರಿದೋಷದಿಂದಲೆನ್ನ ಕಾಡುತಿದೆ ಮಾಯೆ.
ಅದುಯೆಂತೆಂದಡ :
ಜನನ ಮರಣವೆಂಬ ಯಂತ್ರದಲ್ಲಿ ತಿರುವಿ,
ಹೊನ್ನು ಹೆಣ್ಣು ಮಣ್ಣೆಂಬ
ಒರಳೊನಕಿಯ ನಡುವೆ ಹಾಕಿ ಕುಟ್ಟಿ,
ತಾಪತ್ರಯವೆಂಬ ಅಗ್ನಿ ಕುಂಭದೊಳಿಟ್ಟೆನ್ನ ಸುಟ್ಟು
ಸೂರೆಮಾಡಿ ಕಾಡುತಿರ್ದುದೀ ಮಾಯೆ, ಕಳೆವರೆನ್ನಳವಲ್ಲ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.