Index   ವಚನ - 63    Search  
 
ಓಂಕಾರದ ಪ್ರಣಮದ ಮೂಲದಿಂದ ವಸ್ತು ನಿರಾಳ ಪುಟ್ಟಿತು. ನಕಾರದ ಪ್ರಣಮದ ಮೂಲದಿಂದ ನಾದಬ್ರಹ್ಮದಲಿ ಆದಿಯಾಧಾರ ಪುಟ್ಟಿತು. ಮಕಾರದ ಪ್ರಣಮದ ಮೂಲದಿಂದ ವಿಶ್ವತೋಮಯ ವಿಶ್ವತೋಬಾಹು ವಿಶ್ವತೋ ಚಕ್ಷು ಪುಟ್ಟಿತು. ಶಿಕಾರದ ಪ್ರಣಮದ ಮೂಲದಿಂದ ಶಿಕ್ಷೆ ದೀಕ್ಷೆ ಮೋಕ್ಷಕೆ ರುದ್ರನಂಶ ಪುಟ್ಟಿತು. ವಕಾರದ ಪ್ರಣಮದ ಮೂಲದಿಂದ ವಿಷ್ಣು ಸ್ಥಿತಿ ಪುಟ್ಟಿತು. ಯಕಾರದ ಪ್ರಣಮದ ಮೂಲದಿಂದ ಯಥಾಬ್ರಹ್ಮ ತಥಾ ಉತ್ಪತ್ತಿ ಪುಟ್ಟಿತು. ಸಹಕಾರ ಷಡು ಅಕ್ಷರದ ಪ್ರಣಮದ ಮೂಲದಿಂದ ಸಮಸ್ತ ವಿಸ್ತೀರ್ಣ ಪೂರ್ಣವಾಯಿತು. ಆ ಕಾಲ ಕಾಲ ಪರಿವರ್ತನೆಯಲ್ಲಿ ಸದ್ಭಕ್ತ ಸಮಯ ಅಸಂಖ್ಯಾತರು ಪುಟ್ಟಿದರು. ಆ ಅಸಂಖ್ಯಾತರಿಗಾಗಿ ಮೇಘಂಗಳಲಿ ಜಲ ಉದ್ಭವಿಸಿತು. ಆ ಕಾರ್ಯ ಕಾರಣ ಅನುಭವಕ್ಕಾಗಿ ಆದಿಯಲ್ಲಿ ಒಬ್ಬ ಶರಣ ಅನ್ನನಿಶುದ್ಧಿಯಾಗಿದ್ದ ಆತನ ಆತ್ಮ ಸುಧೆಯಾಯಿತು. ಅಕ್ಷುತ್ತಿಗೆ ಸಜ್ಜೀವಿ ಭಕ್ತಂಗೆ ನಿರ್ಜೀವಿ ಭಕ್ತರು ತೃಪ್ತಿಗೆ ಆಹಾರವಾದರು, ಆ ಕಾಲ ಈ ಕಾಲ ಆತನೆ ಅನಾಚಾರಿ, ಆತನೆ ಸದಾಚಾರಿ, ಆತನೆ ಶಿವಾಚಾರಿ. ಆ ಕಾಲ ಸದ್ಭಕ್ತರ ಭಿನ್ನರುಚಿಗಾಗಿ ಸಪ್ತ ಸಮುದ್ರಂಗಳು ಉದಯಂಗೈದವು. ಆಕಾರ ಭಕ್ತಿ ನಿರಾಕಾರ ತೃಪ್ತಿ ಏಕೈಕ್ಯವಾಯಿತು. ಆ ಭಕ್ತನ ನಿಡುಮಂಡೆ ಜಟಾಮಕುಟಕ್ಕೆ ನಕ್ಷತ್ರವು ಪೂಮಾಲೆಯಾಯಿತು. ಆ ಭಕ್ತ ನೋಡುವ ನೇತ್ರ ಚಂದ್ರಸೂರ್ಯರಾದರು. ಆ ಭಕ್ತನ ನಡೆಪಾದತಳ ವಿಧಿಯ ಹೆಪ್ಪಿನಲ್ಲಿ ಪೃಥ್ವಿಯಾಯಿತು. ಆ ಭಕ್ತನ ವದನೆಂಬೂದೇ ಮರ್ತ್ಯ, ಶಿರಸ್ಸುವೇ ಸ್ವರ್ಗ ಆ ಭಕ್ತನ ಕಟಿಸೂತ್ರದಿಂದ ಗಂಗಾಸ್ನಾನಂಗಳಾದವು. ಆ ಭಕ್ತನ ನುಡಿಪರುಷದಿಂದ ತೆತ್ತೀಸಕೋಟಿ ದೇವರ್ಕಳು ಉದಯವಾದರು. ಆ ಭಕ್ತ ಕೊಡುವೆಡೆಗೆ ಕೊಂಬೆಡೆಗೆ ಅಸಂಖ್ಯಾತ ಗಣಾದಿಗಣಂಗಳು ಸಮ್ಮೋಹಿತವಾದರು. ಆ ಭಕ್ತನ ಸಡಗರ[ಕ್ಕೆ], ಸಕಲ ಅನುಭವಕ್ಕೆ ಸಚರಾಚರವಾದವು. ಆ ಭಕ್ತನ ಒಡನಾಡಿ ಶಕ್ತಿ ಗಾಯತ್ರಿಯ ಮೂಲದಲ್ಲಿ ಎಂಬತ್ತು ನಾಲ್ಕು ವರ್ಣಾಶ್ರಮಂಗಳು ಪುಟ್ಟಿದವು. ಆ ಭಕ್ತನ ಷಡಾಧಾರ ಷಡುದರಿಸಿನ ಷಡುಚಕ್ರ ಷಡುಸ್ಥಲಬ್ರಹ್ಮಿ ಆ ಭಕ್ತನೆ ಕೂಡಲಚೆನ್ನಸಂಗನ ಬಸವಣ್ಣ ನಮಸ್ತೇ ನಮಸ್ತುತೆ.