Index   ವಚನ - 92    Search  
 
ಇಚ್ಛೆಯನಾಡಿದರೆ ಲೋಕ ಮಚ್ಚುವುದು ಬೆರವುದು ಕಚ್ಚೆಗಡುಕರ ಸಂಗವ ಮಾಡುವ ಕರ್ಮಸಾಕು ಚುಚ್ಚಕರು ಚುಲ್ಲಕರು ಮುಕ್ತಿಯ ಬೇಡಲರಿಯರು ನಚ್ಚಬೇಡ ಅವರಿಂದ ನರಕ ತಪ್ಪದು. ಹುಚ್ಚಾಗಿ ಹೋಗುವರೆ ಹುದುಗು ಹುಸಿಕರ ನಿಶ್ಚಯವಿಲ್ಲದವರ ಸಂಗ ಉಚ್ಚೆಯಲಿ ಮಿಂದಂತೆ ಬಚ್ಚಿಟ್ಟ ದ್ರವ್ಯವ ಬಂಕುಲಿಗೆ ಹಾಕುವರು. ನುಚ್ಚಕಟ್ಟಬಾರದ ಅರಿವೆಯಲ್ಲಿ ನುರುಕಿದ ರಂಗೋಲೆ ನಿಲುವುದೆ? ಮಚ್ಚಿದ ದಾಸಿ ವೇಸಿಗೆ ಹರಿವ ಕರ್ಮಿಗೆ ಸಿಕ್ಕುವನೆ ಶಿವ? ಲಕ್ಷಕೊಬ್ಬ ಮುಗ್ಧ ದಶಲಕ್ಷಕೊಬ್ಬ ಸಿದ್ಧ ನಿಶ್ಚಯ ಕೋಟಿಗೊಬ್ಬ ಪುರಾತ ಅಚ್ಚಲಿಂಗೈಕ್ಯರು ಅಪೂರ್ವ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.