ತನ್ನ ಸತಿಯಂ ಬಿಟ್ಟು ಅನ್ಯ ಸತಿಗೆರಗುವ
ಕುನ್ನಿ ನಾಯ ಮುಖವ ನೋಡಲಾಗದು.
ಬಿನ್ನಾಣ ಮಾಡಿದ ರೂಪಿನೊಳು ಶಿವನಿಪ್ಪನೆ?
ತನ್ನ ಸತಿ ತನ್ನ ಅಂಗ, ಅನ್ಯ ಸತಿ ಅನ್ಯರಂಗ
ಮುನ್ನವೆ ಪ್ರತಿಗೆ ಪ್ರತಿಯಿಟ್ಟರು ಸತಿ ಪತಿಯ
ತನ್ನ ಧನ ತನ್ನ ಸತಿ ತನ್ನ ಮಕ್ಕಳ
ಇನ್ನೊಬ್ಬ ಕೊಂಡು ಪೋಪಾಗ ಸುಮ್ಮನೆ ಇಪ್ಪನೆ?
ತಿನ್ನ ಬಂದುದ ತಿನ್ನಬೇಕಲ್ಲದೆ ತಿನ್ನದ ತಿಂಬರೆ?
ಮುನ್ನಲೆ ಪರದ್ವಾರದಿಂದ ದಶಶಿರ ರಾವಣನ ಶಿರ ಹೋಯಿತ್ತು.
ಅನ್ಯಾಯದಿಂದ ಕೆಟ್ಟರು ಅನಂತ ಸಮರ್ಥರು,
ಇನ್ನವರಿಗೆ ಜಲ್ಮವಿಲ್ಲ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.