ಆದಿಗುರುವನಪ್ಪಿ ಮಾಡುವ
ಭಕ್ತಿ ಅಂಗ ಆಪ್ತ ಸ್ಥಾನ ಸದ್ಭಾವವೆನಿಪ
ಚತುರ್ವಿಧಭಕ್ತಿ ದಿವ್ಯಪ್ರಕಾಶಮಯವಾಗಿ ತೋರುತಿಪ್ಪುದು.
ಅನಾದಿಪರಶಿವಲಿಂಗವನಪ್ಪಿ ಮಾಡುವ
ಮಂತ್ರ ಧ್ಯಾನ ಜಪ ಸ್ತೋತ್ರವೆನಿಪ
ಚತುರ್ವಿಧಭಕ್ತಿ ಘನಪ್ರಕಾಶಮಯವಾಗಿ ತೋರುತಿಪ್ಪುದು.
ನಿರಂಜನ ಜಂಗಮವನಪ್ಪಿ ಮಾಡುವ ಕನಕ,
ಖಟ್ವಾಂಗಾದಿ ಹದಿನೆಂಟು,
ಮಹಾಘನಪ್ರಕಾಶಮಯವಾಗಿ ತೋರುತಿಪ್ಪುದು.
ಇಂತು ತನ್ನ ಗುರುಲಿಂಗಜಂಗಮಕ್ಕೆ
ತನ್ನ ತಾ ಭಕ್ತಿಯ ಭಿನ್ನವಳಿದುಳಿದು
ಭಿನ್ನವಾಗಿ ಮಾಡುತಿರ್ದನ್ನು ಗುರುನಿರಂಜನ
ಚನ್ನಬಸವಲಿಂಗ ಸನ್ನಿಹಿತ.