Index   ವಚನ - 232    Search  
 
ಸಂಗವನರಿದು ಜರೆದು ಸಂಗಸಂಬಂಧವಾದ ಚಿನುಮಯ ಚನ್ನಮಹೇಶ್ವರನ ತನುಮನಭಾವಂಗಳು ಮತ್ತೊಂದಕ್ಕೆ ಆಸ್ಪದವಿರಹಿತವಾಗಿರ್ದವು. ಅದೆಂತೆಂದೊಡೆ, ಗುರುಭಕ್ತಿಸೇವಾನುಕೂಲಿ ಕಾಯದ ಗತಿಯುಳ್ಳನ್ನಕ್ಕರ ಕಂಡು ಮಾಡಿ ವಿನೋದಿಸಬೇಕೆಂಬುದೊಂದು ನಿರುತ, ಮಂತ್ರ ಧ್ಯಾನ ಜಪ ಸ್ತೋತ್ರಾದಿಗಳಿಂದೆ ಲಿಂಗಾರ್ಚನೆಯವಸರ ಮನವುಳ್ಳನ್ನಕ್ಕರ ಮಾಡಿ ನೋಡಿ ಆನಂದಿಸಬೇಕೆಂಬುದೊಂದು ನಿಷ್ಠೆ. ಅನ್ನ ವಸ್ತ್ರ ಆಭರಣಾದಿ ಹದಿನೆಂಟು ತೆರದ ಭಕ್ತಿಯಾರಾಧನೆ ಪ್ರಾಣಾದಿ ದ್ರವ್ಯವುಳ್ಳನ್ನಕ್ಕರ ಮಾಡಿ ನೀಡಿ ಸುಖಿಸಬೇಕೆಂಬುದೊಂದು ಭಾವದ ನಿರುತ. ಇಂತು ತ್ರಿವಿಧ ಪದದಲ್ಲಿ ತ್ರಿವಿಧ ವಿದ್ಯಾಸನ್ನಿಹಿತನಾಗಿ ಎಡೆದೆರಹಿಲ್ಲದಿರುತಿರ್ದನು ಗುರುನಿರಂಜನ ಚನ್ನಬಸವಲಿಂಗನಲ್ಲಿ.