Index   ವಚನ - 308    Search  
 
ದ್ವಾದಶೇಂದ್ರಿಯಂಗಳು ಶೀಲಸಂಪಾದನೆಯ ಹಿಡಿದು ನಡೆವುತಿರ್ದ ಕಾರಣ, ಇಂದ್ರಿಯಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು. ದಶವಾಯುಗಳು ಸಚ್ಚರಿತದಿಂದಾಚರಿಸುತಿರ್ದ ಕಾರಣ, ಪ್ರಾಣಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು. ಶ್ರುತಿಜ್ಞಾನ ಮತಿಜ್ಞಾನ ಅವಧಿಜ್ಞಾನ ಮನಪರ್ಯಾಯಜ್ಞಾನ ನಿರುತಜ್ಞಾನ ವಿರಾಗತೆಜ್ಞಾನಂಗಳೆಲ್ಲ ಮಹಾಜ್ಞಾನವಿಡಿದಿರ್ದವಾಗಿ ಜ್ಞಾನಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು. ಜ್ಞಾನವಿಕೃತಿಭಾವ ವರ್ತನಾವಿಕೃತಿಭಾವ ಮೋಹನವಿಕೃತಿಭಾವಂಗಳೆಲ್ಲ ಮಹಾನುಭಾವವಾಗಿ ಸೂಚಿಸುತಿರ್ದಕಾರಣ, ಭಾವಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು. ಪುರಾಣತೂರ್ಯ ದ್ವೈತತೂರ್ಯ ಅದ್ವೈತತೂರ್ಯ ತ್ರಿಪುಟಿತೂರ್ಯ ಯೋಗತೂರ್ಯಾದಿಗಳೆಲ್ಲಾ ಶಿವಯೋಗತೂರ್ಯವಾಗಿ ಪರವಶವಾಗಿರ್ದಕಾರಣ, ತೂರ್ಯಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು. ಇಂತು ಪಂಚಾಂಗದಲ್ಲಿ ಪಂಚಾಚಾರ ಪೀಠವಾಗಿ ನಾನೊಪ್ಪುತಿರ್ದಕಾರಣ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಮಹದಾನಂದದೊಳೋಲಾಡುತಿರ್ದೆನು.