Index   ವಚನ - 375    Search  
 
ಪೃಥ್ವಿಯಂಶವನಳಿದು ಆಚಾರಲಿಂಗವನರಿದು, ಸುಚಿತ್ತವೆಂಬ ಹಸ್ತದಿಂದೆ ಶ್ರದ್ಧೆಯುಕ್ತವಾಗಿ ಅರ್ಪಿಸಿಕೊಳ್ಳಬಲ್ಲರೆ ಪ್ರಸಾದಿಯಯ್ಯಾ. ಅಪ್ಪುವಿನಂಶವನಳಿದು ಗುರುಲಿಂಗವನರಿದು ಸುಬುದ್ಧಿಯೆಂಬ ಹಸ್ತದಿಂದೆ ನೈಷ್ಠಿಕಾಯುಕ್ತವಾಗಿ ಅರ್ಪಿಸಿಕೊಳ್ಳಬಲ್ಲರೆ ಪ್ರಸಾದಿಯಯ್ಯಾ ಅಗ್ನಿಯಂಶವನಳಿದು ಶಿವಲಿಂಗವನರಿದು ನಿರಹಂಕಾರವೆಂಬ ಹಸ್ತದಿಂದೆ ಸಾವಧಾನಯುಕ್ತವಾಗಿ ಅರ್ಪಿಸಿಕೊಳ್ಳಬಲ್ಲರೆ ಪ್ರಸಾದಿಯಯ್ಯಾ. ವಾಯುವಿನಂಶವನಳಿದು ಜಂಗಮಲಿಂಗವನರಿದು ಸುಮನವೆಂಬ ಹಸ್ತದಿಂದೆ ಅನುಭಾವಯುಕ್ತವಾಗಿ ಅರ್ಪಿಸಿಕೊಳ್ಳಬಲ್ಲರೆ ಪ್ರಸಾದಿಯಯ್ಯಾ. ಆಕಾಶದಂಶವನಳಿದು ಪ್ರಸಾದಲಿಂಗವನರಿದು ಸುಜ್ಞಾನವೆಂಬ ಹಸ್ತದಿಂದೆ ಆನಂದಯುಕ್ತವಾಗಿ ಅರ್ಪಿಸಿಕೊಳ್ಳಬಲ್ಲರೆ ಪ್ರಸಾದಿಯಯ್ಯಾ. ಇಂತು ಪಂಚತತ್ವಪ್ರಕೃತಿಯನಳಿದು ಗುರುನಿರಂಜನ ಚನ್ನಬಸವಲಿಂಗವನರಿದು ಸದ್ಭಾವವೆಂಬ ಹಸ್ತದಿಂದೆ ಸಮರಸಯುಕ್ತವಾಗಿ ಅರ್ಪಿಸಿಕೊಳ್ಳಬಲ್ಲರೆ ಪ್ರಸಾದಿಯಯ್ಯ.