Index   ವಚನ - 376    Search  
 
ಅರ್ಪಿತಾಂಗದ ಮೇಲಿಪ್ಪ ಅಖಂಡಲಿಂಗಕ್ಕೆ ಅರ್ಪಿತವನರ್ಪಿಸಿ ಆನಂದಿಸಿಕೊಂಬುವನಯ್ಯ ತನ್ನ ವಿನೋದಕ್ಕೆ. ಅರ್ಪಿತ ಪ್ರಾಣದಮೇಲಿಪ್ಪ ಅವಿರಳಲಿಂಗಕ್ಕೆ ಅರ್ಪಿತವನರ್ಪಿಸಿ ಆನಂದಿಸಿಕೊಂಬುವನಯ್ಯ ತನ್ನ ವಿನೋದಕ್ಕೆ, ಅರ್ಪಿತ ಭಾವದಮೇಲಿಪ್ಪ ಅಭಿನ್ನ ಲಿಂಗಕ್ಕೆ ಅರ್ಪಿತವನರ್ಪಿಸಿ [ಆನಂದಿಸಿ] ಕೊಂಬುವನಯ್ಯ ತನ್ನ ವಿನೋದಕ್ಕೆ. ಅರ್ಪಿಸಿಕೊಂಡಿಪ್ಪ ಗುರುನಿರಂಜನ ಚನ್ನಬಸವಲಿಂಗಕ್ಕೆ ಅರ್ಪಿತವನರ್ಪಿತವಾಗಿರ್ಪನಯ್ಯ ತನ್ನ ವಿನೋದಕ್ಕೆ ನಿಮ್ಮ ಪ್ರಸಾದಿ.