Index   ವಚನ - 718    Search  
 
ಪರಶಿವತತ್ವಾನುಭಾವಿ ಶರಣ ಲೋಕದ ಸಂಸಾರಿಗಳಿಗೊಮ್ಮೆ ಬೇಡಬೇಕೆಂಬುದು ಹುಸಿಯದು ತನ್ನಂತರಂಗದಲ್ಲಿ. ಅದೇನು ಕಾರಣವೆಂದೊಡೆ, ಚತುರ್ವಿಧಪದವನೊದೆದು ನಿಂದಿರ್ದನಾಗಿ. ಪರವಧುವನೊಮ್ಮೆ ನೋಡಿಯೆಳಸುವನಲ್ಲ ಮನಸ್ಸಿನಲ್ಲಿ ; ಅದೇನು ಕಾರಣವೆಂದೊಡೆ, ಮಾಯೆಯ ಸಂಬಂಧವ ಕೊಡಹಿ ಜರಿದು ಹೇಯವಮಾಡಿದನಾಗಿ. ಪರಹಿಂಸೆಯನೊಮ್ಮೆ ಭಾವದಲ್ಲಿ ಅರಿಯನು ; ಅದೇನು ಕಾರಣವೆಂದೊಡೆ, ಸಕಲಭುವನ ಬ್ರಹ್ಮಾಂಡದೊಳ ಹೊರಗು ತಾನೆಯಾಗಿ ತನಗೊಂದೂ ಇತರವಾದುದಿಲ್ಲವಾಗಿ. ಸುಕ್ಷೇತ್ರಾದಿ ಸಕಲಸ್ಥಾವರಂಗಳನೊಮ್ಮೆ ಹಿರಿದೆಂದು ಭಾವಿಸನು. ಅದೇನು ಕಾರಣವೆಂದೊಡೆ, ಗುರುನಿರಂಜನ ಚನ್ನಬಸವಲಿಂಗಕ್ಕೆ ತನ್ನನರ್ಪಿಸಿ ತಾನಾಗಿರ್ದನಾಗಿ.