ವಚನ - 1316     
 
ನೇತ್ರಂ ದೇವೋ ನ ಚಾಪರಃ ಎಂಬ ಶ್ರುತಿಯುಂಟಾಗಿ ನೇತ್ರವು ಪರಶಿವಲಿಂಗ ಪರಬ್ರಹ್ಮವು. ನೇತ್ರಂ ಸರ್ವಜ್ಞ ಮೇ ವಪುಃ ಎಂಬ ಶ್ರುತಿಯುಂಟಾಗಿ, ನೇತ್ರವು ಶಿವಲಿಂಗಕ್ಕೆ ದೇಹವು. “ನೇತ್ರಮಧ್ಯೋದ್ಭವಂ ಲಿಂಗಂ ಎಂಬ ಶ್ರುತಿಯುಂಟಾಗಿ ನೇತ್ರವು ಲಿಂಗಮೂರ್ತಿಯ ಹೆತ್ತ ತಾಯಿ. ನೇತ್ರಮಧ್ಯಜಚಿತ್ಸುಖಂ ಎಂಬ ಶ್ರುತಿಯುಂಟಾಗಿ ನೇತ್ರವು ಪರಶಿವೇಷ್ಟಲಿಂಗದ ಗುಹ್ಯಕ್ಕೆ ರಾಣಿವಾಸಮಕ್ಕುಂ. ದ್ವಿನೇತ್ರ ಕುಚಯೋರ್ಲಿಂಗಂ ಎಂಬ ಶ್ರುತಿಯುಂಟಾಗಿ ನೇತ್ರವು ಪ್ರಾಣಲಿಂಗದ ಹಸ್ತಂಗಳಿಗೆ ಪಿಡಿವ ಕುಚಂಗಳಕ್ಕುಂ. ಚಕ್ಷುಶ್ಚ ಶಿವ ಪುಷ್ಪಂ ಚ ಎಂಬ ಶ್ರುತಿಯುಂಟಾಗಿ ನೇತ್ರವು ಲಿಂಗಕ್ಕೆ ಅವಿರಳ ಪುಷ್ಪಮಕ್ಕುಂ. ಲಿಂಗಜ್ಯೋತಿಶ್ಚ ನೇತ್ರಯೋಃ ಎಂಬ ಶ್ರುತಿಯುಂಟಾಗಿ ನೇತ್ರಂಗಳು ಲಿಂಗಕ್ಕೆ, ಅಖಂಡ ಜ್ಯೋತಿಯಕ್ಕುಂ. ಲಿಂಗಾಭಿಷೇಕಂ ಚಕ್ಷುಶ್ಚ ಎಂಬ ಶ್ರುತಿಯುಂಟಾಗಿ ನೇತ್ರಂಗಳು ಲಿಂಗಕ್ಕೆ ಅಭಿಷೇಕವ ಮಾಡುವ ಕಳಸಂಗಳಕ್ಕುಂ ಲಿಂಗಸ್ಯ ಸಾಯಕಂ ನೇತ್ರಂ ಎಂಬ ಶ್ರುತಿಯುಂಟಾಗಿ ನೇತ್ರಂಗಳು ಲಿಂಗವನೊಳಗುಮಾಡಿಕೊಂಬುದಕ್ಕೆ ಹಾಕುವ ಬಾಣಂಗಳಕ್ಕುಂ. ಚಕ್ಷುರ್ಲಿಂಗಸ್ಯ ಚಾಕ್ಷುಷಿ ಎಂಬ ಶ್ರುತಿಯುಂಟಾಗಿ, ನೇತ್ರಂಗಳು ಲಿಂಗಮೂರ್ತಿಯ ನೇತ್ರಂಗಳಲ್ಲದೇ ಸ್ವಯಕ್ಕೆ ನೇತ್ರವಿಲ್ಲ. ಈ ನೇತ್ರಂಗಳು ಲಿಂಗಮೂರ್ತಿಯ ನೋಟ ಬೇಟ ಕೂಟದಿಂ, ಭಾವ ಮನ ದೃಕ್ಕೀಲೈಸಿ ನಟ್ಟ ದೃಷ್ಟಿಯಿಂ ನೋಳ್ವ ಲಿಂಗೈಕ್ಯ ಶರಣಂಗಲ್ಲದೆ ಲೋಗರಿಗೆಲ್ಲಿಯದೊ? ಇದು ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ ಈ ನೇತ್ರದ ಮಹಿಮೆಯ ಗುಹೇಶ್ವರನೇ ಬಲ್ಲನಲ್ಲದೆ ಕಣ್ಣಗೆಟ್ಟಣ್ಣಗಳಿವರೆತ್ತ ಬಲ್ಲರು ನೋಡಾ.