Index   ವಚನ - 972    Search  
 
ಜ್ಞಾನವನಂತರಂಗಕಿತ್ತು, ಕ್ರೀಯವ ಬಹಿರಂಗಕಿತ್ತು, ಸರ್ವಾಚಾರಸಂಪತ್ತಿನೊಳಗಿರಿಸಿದ ಕ್ರಿಯಾಘನಗುರುವಿನ ತೆಗೆದುಹಾಕಿ ನಾವು ಲಿಂಗಜಂಗಮಸನ್ನಿಹಿತರೆಂದಡೆ ಆ ನಾಲಿಗೆ ಕೀಳದಿಹರೆ ಕಾಲನವರು? ಆ ಮಹಾಗುರುವಿನ ಸದ್ಭಾವಲಿಂಗವನರ್ಚಿಸುವಲ್ಲಿ ಖಂಡಿಸದಿಹರೆಯಮನವರು? ಆ ಗುರುಜ್ಞಾನ ಭಸಿತವನು ಧರಿಸಿದಲ್ಲಿ ಚರ್ಮವ ಹೆರಜಿ ಬಿಸಾಟರೆ ಅಂತಕನವರು? ಆ ಗುರುಕಟಾಕ್ಷಮಣಿಯ ಧರಿಸಿದಲ್ಲಿ ಕಡಿಕಡಿದು ಕಡೆಗಿಡರೆ ಯಮನವರು? ಆ ಆದಿಯ ಗುರುನಾಮಾಮೃತವ ಸೇವಿಸುವರ ಹೃದಯವನಿರಿದು ಕೆಡಹದಿಹರೆ ದಂಡಧರನವರು? ಆ ಅವಿರಳ ಗುರುವಿನ ಪರಮಾನಂದ ಪಾದೋದಕವ ಕೊಂಬ ಮಾನವರ ಬಾಧಿಸರೆ ಕೀನಾಶನವರು? ಆ ಮಹಾಜ್ಞಾನಿ ಗುರುವಿನ ಮಹದಾನಂದಪ್ರಸಾದವ ಸೇವಿಸುವ ಭಾವವನು ಶೋಕಾಗ್ನಿಯಿಂದೆ ನೋಯಿಸದಿಹರೆ ನಿರಯಪತಿಯವರು? ಇದು ಕಾರಣ ಗುರುವ ಜರಿದು ನೆರೆದು ಮಾಡುವ ಮಾಟವೆಲ್ಲ ವೈತರಣಿಯಕೂಟ ಇದಕ್ಕೆ ನೀವೇ ಸಾಕ್ಷಿ ಗುರುನಿರಂಜನ ಚನ್ನಬಸವಲಿಂಗಾ.