Index   ವಚನ - 1196    Search  
 
ಶುದ್ಧ ನಿರ್ಮಾಯ ನಿರ್ಮಲವೆಂಬ ಅಂಗತ್ರಯದಲ್ಲಿ ಸದ್ಗತಿ ಸತ್ಕ್ರಿಯೆ ಸದ್ಧರ್ಮವೆಂಬ ಪೀಠತ್ರಯದ ಮೇಲೆ ವಿಚಾರಗುರು ವಿನಯಗುರು ಕೃಪಾಗುರುವೆಂಬ ಗುರುತ್ರಯವ ಧರಿಸಿ ಘನಭಕ್ತಿಯ ಕುರುಹಬಲ್ಲರೆ ಆತ ಸತ್ಯಭಕ್ತನೆಂಬೆ. ಸುಬುದ್ಧಿ ನಿಃಕಾಮ ಅನುಕೂಲೆಯೆಂಬ ಮನತ್ರಯದ ವಿಶೇಷಗತಿ ಸುಜ್ಞಾನ ವಿಮಲಜ್ಞಾನವೆಂಬ ಪೀಠತ್ರಯದಮೇಲೆ ಸಗುಣಲಿಂಗ ನಿರ್ಗುಣಲಿಂಗ ನಿರ್ಭೇದ ಲಿಂಗವೆಂಬ ಲಿಂಗತ್ರಯವ ಧರಿಸಿ, ಚಿನ್ಮಯಭಕ್ತಿಯ ಕುರುಹ ಬಲ್ಲರೆ ಆತ ನಿತ್ಯಭಕ್ತನೆಂಬೆ. ಸಂವಿತ್‍ಕಳಾ ಸಂಧಾನಕಳಾ ಸಮರಸಕಳಾಯೆಂಬ ಭಾವತ್ರಯದಲ್ಲಿ, ಮತಿಗಮನ, ರತಿಗಮನ, ಮಹಾರತಿಗಮನವೆಂಬ ಭಾವತ್ರಯದ ಸತ್ಪ್ರೇಮ ಸುಖಮಯ ಆನಂದವೆಂಬ ಪೀಠತ್ರಯದ ಮೇಲೆ ಜ್ಞಾನಜಂಗಮ, ಮಹಾಜ್ಞಾನಜಂಗಮ, ಪರಮಜ್ಞಾನಜಂಗಮವೆಂಬ ಜಂಗಮತ್ರಯವ ಧರಿಸಿ, ಪರಿಪೂರ್ಣಭಕ್ತಿಯ ಕುರುಹ ಬಲ್ಲರೆ ಆತ ನಿಜಭಕ್ತನೆಂಬೆ. ಈ ಭೇದವನರಿಯದೆ ಬರಿಯ ಕಾಯ ಮನ ಭಾವದಲ್ಲಿ ಹುಸಿನೆರವಿಯ ತುಂಬಿ ಹುಸಿಯ ಡಂಭಿನ ಭಕ್ತಿಯ ಕಿಸುಕುಳತ್ವಕ್ಕೆ ಬಿಸಿಯನಿಟ್ಟು, ತಪ್ಪಿಸಿ ತೋರುತಿರ್ದನು ಗಂಭೀರ ಭಕ್ತಿಯ ನೆರೆದು ಚೆಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗನು.