Index   ವಚನ - 1199    Search  
 
ಭಕ್ತಿ ಜ್ಞಾನ ವೈರಾಗ್ಯವುಳ್ಳಾತನೆ ಗಂಭೀರ, ಭಕ್ತಿ ಜ್ಞಾನ ವೈರಾಗ್ಯವಿಲ್ಲದೆ ಅಂಗಮೂರರ ಸಂಗಸೌಖ್ಯವನರಿಯಬಾರದು. ಅದೆಂತೆಂದೊಡೆ:ಅಡಿಯಿಟ್ಟು ಬಂದ ಗುರುಲಿಂಗಜಂಗಮಕ್ಕೆ ಸ್ಥೂಲತನುತ್ರಯವ ಸೂರೆಮಾಡಿದ ಬರವನರಿದು ಸುಮುಖರತಿ ಸಂಧಾನಸುಖವನರಿಯಬಲ್ಲರೆ ಭಕ್ತಿಗಂಭೀರನಹುದೆಂಬೆ. ಸೂಕ್ಷ್ಮತನುವ ಸುಜ್ಞಾನದೊಳಿಟ್ಟು ಸುಯಿಧಾನವೆರೆದು ಅವರಂತಸ್ಥಕ್ಕೊತ್ತೆಗೈದು ಒಲುಮೆಯ ಬರವನರಿದು ಘನರತಿಸಂಬಂಧಸುಖವನರಿಯಬಲ್ಲರೆ ಜ್ಞಾನಗಂಭೀರನೆಂಬೆ. ಕಾರಣತನುವನು ನಿಃಸಂಕಲ್ಪ ನಿರ್ವಂಚನೆ ನಿರ್ಭೇದವೆಂಬ ಸತ್ಯಜ್ಞಾನದಲ್ಲಿರಿಸಿ ಮಿಥ್ಯಮಮಕಾರವ ಛೇದಿಸಿ ಸದ್ಭಾವಗೂಡಿ ಅವರ ಮಹಾನುಭಾವಕ್ಕೊತ್ತೆಗೈದು ಹರುಷರಸಬರವನರಿದು ನಿರ್ಭಾವರಸವೆತ್ತಿ ನಿರ್ವಾಣಸುಖಸಮರಸವ ಬಲ್ಲರೆ ಆತ ವೈರಾಗ್ಯ ಗಂಭೀರನೆಂಬೆ. ಈ ಸೌಭಾಗ್ಯತ್ರಯವನುಳ್ಳಾತನೆ ಚೆಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ತಾನೆ ಬೇರಿಲ್ಲ.