Index   ವಚನ - 1200    Search  
 
ದಿವಾಕರನ ದಿನಕರ್ಮದೊಳಗೆ ನಿಮಿಷಾರ್ಧ ಲಘುಜಡತ್ವವಿಲ್ಲದೆ ಕಾರ್ಯನಾಗಿ ಕಾರಣಾನುಕೂಲಿಯಾದಂತೆ, ನಿಶಾಕರನು ಮಾಸದ್ವಂದ್ವಕರ್ಮಾದಿ ರಾಹುಬಾಧೆಯೊಳು ಲಘುಜಡತ್ವವಿಲ್ಲದೆ ಕಾರ್ಯನಾಗಿ ಕಾರಣಾನುಕೂಲಿಯಾದಂತೆ, ಅಂತಕ್ ಜ್ಞಾನ ಬಾಹ್ಯ ಶಾಂತಾನ್ವಿತ ಶರಣನು ತನ್ನ ನಿತ್ಯ ಜ್ಞಾನ ಕ್ರಿಯಾವರ್ತನದೊಳಗೆ ಗುರುಲಿಂಗಜಂಗಮ ಭಕ್ತಿ ವಿಭವ ವಿನಯವೆಂಬ ವಿಮಲತ್ವವನು ಜರೆಮರಣಾದಿ ದ್ವಂದ್ವಕರ್ಮ ಮಾಯಾ ಶಂಕಾ ವಿಷಮಬಾಧೆಯನೊಗೆದು ಲಘುಜಡತ್ವವಿಲ್ಲದೆ ಕಾರ್ಯನಾಗಿ ಕಾರಣಾನುಕೂಲಿಯಾಗಿ ಮೆರೆವ ಮಹಿಮಾತಿಶಯವನುಳ್ಳ ಭಕ್ತನೆ ಸಾಕ್ಷಾತನೆಂಬೆ. ಚೆಲುವಾತ್ಮಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗನಲ್ಲದೆ ಬೇರಿಲ್ಲ ಕಾಣಾ.