ವಚನ - 1351     
 
ಪ್ರಸಾದಿಗಳು ಪ್ರಸಾದಿಗಳು ಎಂದೆಂಬಿರಿ. ಅಂದು ಇಂದು ಎಂದೂ, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಆದಿ ಅನಾದಿ ಇಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ವೇದಶಾಸ್ತ್ರಂಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಅಜಾಂಡ ಬ್ರಹ್ಮಾಂಡಕೋಟಿಗಳುದಯವಾಗದಂದು ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ತ್ರೈಮೂರ್ತಿಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಉಮೆಯ ಕಲ್ಯಾಣವಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಗಂಗೆವಾಳುಕರಿಲ್ಲದಂದು, ಚೆನ್ನಬಸವಣ್ಣನೊಬ್ಬನೇ ಪ್ರಸಾದಿ. ಲಿಂಗವೆಂಬ ನಾಮ ಜಂಗಮವೆಂಬ ಹೆಸರಿಲ್ಲದಂದು ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಗುಹೇಶ್ವರಾ ನೀನೆ ಲಿಂಗ, ಬಸವಣ್ಣನೆ ಗುರು ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಮತ್ತಾರನು ಕಾಣೆನಯ್ಯಾ.