ಸತ್ಕ್ರಿಯಾ ಸಮ್ಯಕ್‍ಜ್ಞಾನ ಪಥವರಿದ ಭಕ್ತನ ಕುರುಹೆಂತೆನ್ನಲು,
ಮಾಡಿ ಬೇಡುವನಲ್ಲ, ನೀಡಿ ನಿಂತವನಲ್ಲ, ಕಾಣಿಸಿಕೊಂಬುವನಲ್ಲ,
ಡಂಭಕ ವ್ಯಸನಿಯಲ್ಲ, ವಂಚನೆಯ ಸಂಚವನರಿಯದು
ಸರ್ವಾಂಗಸತ್ಯ ನೋಡಾ.
ಕೊಟ್ಟು ಕೊಟ್ಟು ಕೊಡುವ ಭಾವವಲ್ಲದೆ
ಉಳಿದ ಭಾವವ ಮರೆದಿರ್ದ ನೋಡಾ.
ಚಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ
ನಿಮ್ಮ ಶರಣನ ನಿಲವು ನೋಡಾ.