Index   ವಚನ - 12    Search  
 
ಅಯ್ಯಾ, ಗುರುಚರಪರಭಕ್ತಗಣ ಸಮಸ್ತ ಜಾತಿ ಮೊದಲಾದವರ ತೋಟ ಹೊಲ ಗದ್ದೆ ಕಾಸಾರ ಮೊದಲಾದ ಜಾಜಿ ಮಲ್ಲಿಗೆ ಸೂಜಿಮಲ್ಲಿಗೆ ದುಂಡುಮಲ್ಲಿಗೆ ಸಂಪಿಗೆ ಪಚ್ಚೆ ದವನ ಅವರ ಮನೆಮಠಗಳಿಗೆ ಮೊದಲಾಗಿ ಶ್ರೀಗಂಧ ಚಂದನ ಅಗರು ಲಾಮಂಚ ಕಸ್ತೂರಿ ಪುಣುಗು ಶ್ರೀಗಂಧತೈಲ ಸಂಪಿಗೆತೈಲ ಮೊದಲಾದವಕಿಚ್ಫೈಸಿ ಅವರ ಬಂಧಿಸಿ ಕೆಲವ ತಂದು, ಅಪಹರಿಸಿ ಕೆಲವ ತಂದು, ಗುಹ್ಯಲಂಪಟ ಮೋಹಿಯಾಗಿ ಆ ಪದಾರ್ಥವ ಜಾರಸ್ತ್ರೀ ಸೂಳೆ ಶ್ವಪಚಗಿತ್ತಿ ಮುಂತಾದವರ ಮುಡಿಗಳಿಗೆ ಕಟ್ಟಿ, ತಾನು ವಾಸಿಸಿ ಸುಖಿಸಿ ಕಾಲ ಕಾಮರಿಗೊಳಗಾಯಿತಯ್ಯ ಎನ್ನ ಘ್ರಾಣೇಂದ್ರಿಯವು. ಇಂತಾ ಭವಪಾಶಪ್ರಾಣಿಗಳ ಸಂಗದಿಂದ ನಿಮ್ಮ ಮರೆದೆನಯ್ಯ. ಇನ್ನೆನಗೆ ನಿನ್ನೊಲುಮೆಯಿಂದ ನೋಡಿ, ಭವಸಾಗರವ ದಾಂಟಿಸಯ್ಯ. ಜಗದಾರಾಧ್ಯ ಪರಮಾನಂದಮೂರ್ತಿ, ಎನ್ನಪರಾಧವ ನೋಡದೆ, ನಿಮ್ಮ ಸದ್ಭಕ್ತ ಶಿವಶರಣ ಮೋಳಿಗಯ್ಯಗಳ ಲೆಂಕನ ಚರಣಧೂಳವ ವಾಸಿಸುವಂತೆ ಮಾಡಯ್ಯ ಅಪರಾಧಕ್ಷಮಿತ ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.