Index   ವಚನ - 14    Search  
 
ಅಯ್ಯಾ, ಹಲವು ದೇಶಕೋಶಗಳು, ಹಲವು ತೀರ್ಥಕ್ಷೇತ್ರಂಗಳು, ಹಲವು ಸ್ತ್ರೀಯರ ಅಂದಚಂದಗಳು, ಹಲವು ತೇರು ಜಾತ್ರೆಗಳು, ಹಲವು ಆಟಪಾಟಗಳು, ಹಲವು ಅರಿವೆ ಆಭರಣಗಳು, ಹಲವು ಆನೆ ಕುದುರೆ ಅಂದಳಗಳು, ಹಲವು ಚಿತ್ರವಿಚಿತ್ರ ಛತ್ರ ಚಾಮರಗಳು, ಹಲವು ಹಣ್ಣು ಫಲಾದಿಗಳು, ಹಲವು ಪತ್ರೆ ಪುಷ್ಪಂಗಳು, ಹಲವು ಮೆಟ್ಟುವ ಚರವಾಹನ ಮೊದಲಾಗಿ ನೋಡಿದಾಕ್ಷಣವೇ ದೀಪಕ್ಕೆ ಪತಂಗ ಎರಗುವಂತೆ, ಹಲವು ಪ್ರಾಣಿಗಳಿಗೆ ತಿಗಳ ಎರಗುವಂತೆ, ಮೀನಿಗೆ ಗುಂಡುಮುಳುಗನಪಕ್ಷಿ ಎರಗುವಂತೆ, ಹಲವ ಹಂಬಲಿಸಿ, ಕಂಡುದ ಬಿಡದ ಮುಂಡೆ ಪಿಶಾಚಿಯಂತೆ, ಜನ್ಮಾಂತರವೆತ್ತಿ ತೊಳಲಿತಯ್ಯ ಎನ್ನ ನೇತ್ರೇಂದ್ರಿಯವು. ಇಂಥ ಕರ್ಮಜಡ ಜೀವರ ಸಂಗದಿಂದ ಕೆಟ್ಟೆ ಕೆಟ್ಟೆ. ಶಿವಧೊ ಶಿವಧೊ ಎಂದು ಮೊರೆಯಿಟ್ಟೆನಯ್ಯ. ದೇವ ನಿಮ್ಮ ಕೃಪಾದೃಷ್ಟಿಯಿಂದ ನೋಡಿ ನಿಮ್ಮ ಸದ್ಭಕ್ತೆ ಶಿವಶರಣೆ ಅಕ್ಕನೀಲಾಂಬಿಕೆ ತಾಯಿಗಳ ತೊತ್ತಿನ ತೊತ್ತು ಸೇವೆಯ ಮಾಡುವ ಗೌಡಿಯ ಚರಣವ ಏಕಚಿತ್ತದಿಂದ ನೋಡಿ ಸುಖಿಸುವಂತೆ ಮಾಡಯ್ಯ. ಎನ್ನಾಳ್ದ ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.