Index   ವಚನ - 20    Search  
 
ಅಯ್ಯಾ, ತನ್ನ ಅಜ್ಞಾನ ಮೂಲಹಂಕಾರದಿಂದ ಗುರುಚರಪರಭಕ್ತಗಣಂಗಳ ಕಂಡಡೆ ತಲೆವಾಗದಯ್ಯ ಎನ್ನ ಮನವು. ತನ್ನ ಬೈರೂಪದ ಬಿಂಕದಿಂದ ಗುರುಹಿರಿಯರು ಮಾತನಾಡಿದಡೆ ಭೃತ್ಯಭಾವದಿಂದ ಮಾತನಾಡದಯ್ಯ ಎನ್ನ ಮನವು. ಹಾ! ಹಾ! ಯತಿಗಳು ದಾರಿಯಲ್ಲಿ ಬಂದಡೆ ತನ್ನ ಗರುವಿನಿಂದ ಅವರಿಗೆ ಹಾದಿಯ ಬಿಡದಯ್ಯ ಎನ್ನ ಮನವು ಹರಗುರುವಾಕ್ಯವಿಡಿದು ಆಚರಿಸುವ ನಿಜನಿಷ್ಠ ಶೀಲವ್ರತಿಗಳ ಕಂಡಡೆ ತನ್ನ ಗರುವಿನಿಂದ ಉರಿಮಾರಿಯಂತೆ, ಕೋಣ ಮಲತು ಗರುವಿನಿಂದ ತಿರುಗುವಂತೆ, ಅವರ ಮೇಲೆ ಮಚ್ಚರಿಸಿತಯ್ಯ ಎನ್ನ ಮನವು, ಇಂತಾ ಪರಮಪಾತಕ ಮನದ ಸಂಗದಿಂದ ನೊಂದು ಬೆಂದು ಕಂಗೆಟ್ಟು ಕಂದಿ ಕುಂದಿ ತೊಳಲಿ ಬಳಲಿದೆನಯ್ಯ ಇಂತಹ ಕುಮನಸಂಗವ ಪರಿಹರಿಸಿ ಸಲಹಯ್ಯ ಶ್ರೀಗುರುಲಿಂಗಜಂಗಮನೆ ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.