Index   ವಚನ - 21    Search  
 
ಅಯ್ಯಾ, ಎನ್ನ ಜೀವ ಮನದ ಸಂಗದಿಂದ ಬಹುಬಂಧನಕ್ಕೊಳಗಾಗುವುದಯ್ಯ. ಒಂದು ಕ್ಷಣಕ್ಕೆ ಜ್ಞಾನಿಯಾಗುವುದಯ್ಯ. ಮತ್ತೊಂದು ಕ್ಷಣಕ್ಕೆ ಅಜ್ಞಾನಿಯಾಗುವುದಯ್ಯ. ಒಂದು ವೇಳೆ ಮಹಾಪಾಪಿಯಾಗುವುದಯ್ಯ. ಮತ್ತೊಂದು ವೇಳೆ ಮಹಾಪುಣ್ಯ ಶರೀರಿಯಾಗುವುದಯ್ಯ. ತನ್ನೊಗಣ ಗುಪ್ತಪಾತಕದ ಬುದ್ಧಿಯ ಬಿಡದಯ್ಯ. ಮತ್ತಾರನಾದಡು ಜರೆದು ಗ್ರಂಥಾರ್ಥವ ತಂದು ಬುದ್ಧಿಯ ಹೇಳುವುದಯ್ಯ. ತಾನವಗುಣಿಯಾಗಿ ಚರಿಸುವುದಯ್ಯ. ಇಂಥ ಜೀವನ ಸಂಗವ ಪರಿಹರಿಸಿ ರಕ್ಷಿಸಯ್ಯ ಪರಮಾನಂದಮೂರ್ತಿ ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾ ಶ್ರೀ ಗುರುಸಿದ್ಧಲಿಂಗೇಶ್ವರ.