Index   ವಚನ - 29    Search  
 
ಅಯ್ಯಾ, ಮತ್ತೊಂದು ವೇಳೆ ಅಷ್ಟತನುವಿನ ಮೂಲಹಂಕಾರವನೆತ್ತಿ ಚರಿಸಿತಯ್ಯ. ಅದೆಂತೆಂದಡೆ: ಆ ಮೂಲಹಂಕಾರವೆ ಷೋಡಶಮದವಾಗಿ ಬ್ರಹ್ಮನ ಶಿರವ ಕಳೆಯಿತಯ್ಯ, ವಿಷ್ಣುವನು ಹಂದಿಯಾಗಿ ಹುಟ್ಟಿಸಿತಯ್ಯ. ಇಂದ್ರನ ಶರೀರವ ಭವದ ಬೀಡು ಯೋನಿದ್ವಾರವ ಮಾಡಿತಯ್ಯ. ಸೂರ್ಯ ಚಂದ್ರರ ಭವರಾಟಾಳದಲ್ಲಿ ತಿರಿಗಿಸಿತಯ್ಯ. ಆ ಮದಂಗಳಾವುವೆಂದಡೆ: ಕುಲಮದ, ಛಲಮದ, ಧನಮದ, ಯೌವನಮದ, ರೂಪುಮದ, ವಿದ್ಯಾಮದ, ರಾಜ್ಯಮದ, ತಪಮದ, ಸಂಸ್ಥಿತ, ತೃಣೀಕೃತ, ವರ್ತಿನಿ, ಕ್ರೋಧಿನಿ, ಮೋಹಿನಿ, ಅತಿಚಾರಿಣಿ, ಗಂಧಚಾರಿಣಿ, ವಾಸಿನಿ ಎಂಬ ಷೋಡಶಮದದ ಸಂದಿನಲ್ಲಿ ಎನ್ನ ಕೆಡಹಿ, ಬಹುದುಃಖದಲ್ಲಿ ಅಳಲಿಸಿತಯ್ಯ. ಗುರುವೆ, ಇಂಥ ದುರ್ಜೀವ ಮನದ ಸಂಗವ ತೊಲಗಿಸಿ ಕಾಯಯ್ಯ ಕರುಣಾಳುವೆ, ಸಚ್ಚಿದಾನಂದಮೂರ್ತಿ ಭವರೋಗವೈದ್ಯನೆ ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.