Index   ವಚನ - 31    Search  
 
ಅಯ್ಯಾ, ಮತ್ತೊಂದು ವೇಳೆ ಅಡವಿ ಅರಣ್ಯದಲ್ಲಿ ಮಹಾತಪವ ಮಾಡಿ ಅಜ್ಞಾನದಿ ಬ್ರಹ್ಮಪದ ವಿಷ್ಣುಪದ ರುದ್ರಪದ ಇಂದ್ರಪದ ಪಡೆವೆನೆಂದು, ಜ್ಞಾತೃ-ಜ್ಞಾನ-ಜ್ಞೇಯವೆಂಬ ಅಜ್ಞಾನತ್ರಯಂಗಳಿಂದ ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಯೆಂಬ ಅಷ್ಟಾಂಗಯೋಗಾಭ್ಯಾಸದ ಸಂಕೋಲೆಯಲ್ಲಿ ಕೆಡಹಿ ಕಣ್ಣೀರು-ಶ್ಲೇಷ್ಮವ ಕುಡಿಸಿತಯ್ಯ. ಇಂಥ ಭವಭಾರಿ ಜಡಜೀವಮನದ ಪರಿಹರದ ಸುಖವೆಂದಿಗೆ ದೊರೆವುದೊ? ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.