Index   ವಚನ - 32    Search  
 
ಅಯ್ಯಾ, ಎನ್ನ ಜೀವ ಮನ ಪ್ರಾಣಂಗಳಿಂದ, ಸಮಸ್ತ ಯುಗಾಂತರದಲ್ಲಿ ಬರಬಾರದ ಯೋನಿಯಲ್ಲಿ ಬಂದೆನಯ್ಯ, ಉಣ್ಣಬಾರದ ಆಹಾರಂಗಳನುಂಡೆನಯ್ಯ, ಮಾಡಬಾರದ ವ್ಯವಹಾರಂಗಳ ಮಾಡಿದೆನಯ್ಯ. ನೂರೊಂದುಕುಲ ಮೊದಲಾದ ಸಮಸ್ತಜಾತಿಯ ಸ್ತ್ರೀಯರ ಭೋಗಿಸಿದೆನಯ್ಯ. ನುಡಿಯಬಾರದಪವಾದವ ನುಡಿದೆನಯ್ಯ, ನಡೆಯಬಾರದನಾಚಾರದಲ್ಲಿ ನಡೆದೆನಯ್ಯ, ತಿರುಗಬಾರದ ದೇಶವ ತಿರುಗಿದೆನಯ್ಯ. ಹುಸಿಯನೆ ಮನೆಗಟ್ಟಿದೆನಯ್ಯ; ಹುಸಿಯನೆ ಹಾಸಿ ಹೊದ್ದೆನಯ್ಯ. ಹುಸಿಯನೆ ಆಭರಣವ ಮಾಡಿ ಸರ್ವಾಂಗಕ್ಕೆ ಆಚ್ಫಾದಿಸಿಕೊಂಡೆನಯ್ಯ, ಇನ್ನೆನಗೆ ಗತಿಮೋಕ್ಷವುಂಟೆ? ಎಲೆದೇವ, ನಿನ್ನೊಲುಮೆಯಿಂದ ಏನಾದಡಾಗಲಿ. ಎನ್ನಲ್ಲಿ ನೋಡಿದಡೆ ಅಣುಮಾತ್ರ ಸುಗುಣವಿಲ್ಲವಯ್ಯ, ನಿಷ್ಪ್ರಪಂಚ ನಿರಾತಂಕಮೂರ್ತಿ ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.