ಅಯ್ಯಾ, ಈ ದುರಾಚಾರ ದುರ್ಜೀವ ಮನಪ್ರಾಣಂಗಳಿಂದ
ಗುಹ್ಯಲಂಪಟ-ಜಿಹ್ವಾಲಂಪಟಕ್ಕೊಳಗಾಗಿ,
ಹೊಟ್ಟೆಬೇನೆ, ತಲೆಬೇನೆ, ಕಣ್ಣುಬೇನೆ, ಮೈಶೂಲೆ
ಹುಣ್ಣು, ಉಷ್ಣ, ಮೂಲವ್ಯಾಧಿ, ಗಿಣ್ಣುರೋಗ, ಉರಿ, ಚಳಿ ಮೊದಲಾಗಿ
ಮೂನ್ನೂರರವತ್ತು ವ್ಯಾಧಿಯ ಹುಳುಗೊಂಡದಲ್ಲಿ ಬಿದ್ದು ತೊಳಲಿದೆನಯ್ಯ.
ಎನ್ನ ತಾಯಿ-ತಂದೆ ಬಂಧು-ಬಳಗ ಒಡಹುಟ್ಟಿದವರು
ಪುತ್ರ ಪುತ್ರಿ ಪೌತ್ರ ಮೊದಲಾಗಿ
ಸಂಸಾರವೆಂಬ ಭವಬಂಧನಬಾಧೆ ಲಂಪಟದಿಂದ
ತೊಳಲಿದೆನಯ್ಯ ಗುರುವೆ.
ಇಂಥ ಅನಾಚಾರದಲ್ಲಿ ವರ್ತಿಸಿ,
ಮತ್ತೊಬ್ಬರಿಗೆ ಸದಾಚಾರವ ಹೇಳಿ,
ನಿಂದ್ಯ-ವಂದನೆಯಿಂದ ಸಮಸ್ತಯೋನಿ
ಭವರಾಟಾಳದಲ್ಲಿ ತಿರುಗಿದೆನಯ್ಯ!
ಶ್ರೀಗುರುಲಿಂಗಜಂಗಮವೆ,
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.
Art
Manuscript
Music
Courtesy:
Transliteration
Ayyā, ī durācāra durjīva manaprāṇaṅgaḷinda
guhyalampaṭa-jihvālampaṭakkoḷagāgi,
hoṭṭebēne, talebēne, kaṇṇubēne, maiśūle
huṇṇu, uṣṇa, mūlavyādhi, giṇṇurōga, uri, caḷi modalāgi
mūnnūraravattu vyādhiya huḷugoṇḍadalli biddu toḷalidenayya.
Enna tāyi-tande bandhu-baḷaga oḍahuṭṭidavaru
putra putri pautra modalāgi
sansāravemba bhavabandhanabādhe lampaṭadinda Toḷalidenayya guruve.
Intha anācāradalli vartisi,
mattobbarige sadācārava hēḷi,
nindya-vandaneyinda samastayōni
bhavarāṭāḷadalli tirugidenayya!
Śrīguruliṅgajaṅgamave,
harahara śivaśiva jayajaya karuṇākara
matprāṇanātha mahāśrīgurusid'dhaliṅgēśvara.