ಯೋಗಿಯಲ್ಲ; ಜೋಗಿಯಲ್ಲ; ಶ್ರವಣನಲ್ಲ; ಸನ್ಯಾಸಿಯಲ್ಲ;
ಕಾಳಾಮುಖಿಯಲ್ಲ; ಪಾಶುಪತಿಯಲ್ಲ;
ಈ ಷಡುದರುಶನಂಗಳಾಚರಣೆಯಲ್ಲ. ಶರಣನಾಚರಣೆ ಬೇರೆ.
ಆದಿಶೈವ, ಮಹಾಶೈವ, ಅನುಶೈವ, ಅಂತರಶೈವ,
ಪ್ರವರಶೈವ, ಅಂತ್ಯ ಶೈವವೆಂಬ ಈ ಆರು ಶೈವದ ನೀತಿಯಲ್ಲ.
ಇಂತಿವೆಲ್ಲರ ಉತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತ.
ಶುದ್ಧ, ವಿಶೇಷ, ನಿರ್ವಾಣವೆಂದು ವೀರಶೈವ ಮೂರು ತೆರನಾಗಿಪ್ಪುದು.
ಆ ಮೂರು ತಾನೆ ಆರು ತೆರನಾಗಿ ತೋರಿತ್ತದೆಂತೆಂದೊಡೆ:
ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂದು.
ಇಂತೀ ಆರು ಪ್ರಕಾರದಲ್ಲಿ ವರ್ತಿಸುತ್ತಿಹುದು ವೀರಶೈವ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.