ತಂದೆ ತಾಯಿಗಳ ವಿಕಾರದ ಶುಕ್ಲ ಶೋಣಿತದ ಸಂಬಂಧವಪ್ಪ
ಸರ್ವಸೂತಕತನುವಿಡಿದ ಪ್ರಾಣಿಗಳಿಗೆ
ಯಮನ ಸಂಹಾರವ ಕಲ್ಪಿಸಿಕೊಂಡಿಪ್ಪ ಶಿವನ
ಪರಿಯಾನಾರೂ ಅರಿಯರಲ್ಲ.
ಈ ಮಾಯಿಕ ಸಂಬಂಧವಾದ ದೇಹ ತಾನೆಂದೆಂಬ
ಮೂಢಾತ್ಮರ ನಾನೇನೆಂಬೆನಯ್ಯ?
ಆತ್ಮ ಅನಾತ್ಮನ ವಿಚಾರಿಸಿ ತಿಳಿಯಲು
ಅಚೇತನವಾದ ಅನಾತ್ಮ ಸ್ವರೂಪೇ ದೇಹ;
ಆ ದೇಹಕ್ಕೆ ಆಶ್ರಯವಾಗಿಪ್ಪ ಚೈತನ್ಯನೇ ಆತ್ಮನು.
ಇದು ಕಾರಣ, ದೇಹವೇ ಜಡ; ಆತ್ಮನೇ ಅಜಡನು.
ಅದೇನುಕಾರಣ ದೇಹ ಜಡ, ಆತ್ಮನು ಅಜಡನುಯೆಂದಡೆ;
ದೇಹವೇ ಮಾಯಾ ಕಾರ್ಯವಾದ ಕಾರಣ ಜಡ;
ಇದು ಕಾರಣ, ಇಂದ್ರಿಯಂಗಳು ಜಡ; ವಿಷಯಂಗಳು ಜಡ;
ಕರಣಂಗಳು ಜಡ; ವಾಯುಗಳು ಜಡ; ಆತ್ಮನೇ ಅಜಡನು.
ಆತ್ಮನದೇನುಕಾರಣ ಅಜಡನೆಂದರೆ
ಶಿವಾಂಶಿಕನಾದ ಕಾರಣ ಅಜಡನು.
ಆ ಶುದ್ಧ ಚಿದ್ರೂಪನಾದ ಆತ್ಮನು
ಅವಿದ್ಯಾ ಸಂಬಂಧವಾದ ದೇಹೇಂದ್ರಿಯದ ಸಂಗದಿಂದ
ಸಂಸಾರಿಯಾಗಿಪ್ಪನು ನೋಡಾ.
ಈ ಸಂಸಾರ ವ್ಯಾಪ್ತಿಯಹಂಥ
ಜೀವನದ ಗುಣವ ಕಳೆದುಳಿದಿಹನೆಂದಡೆ
ದೇವ ದಾನರ ಮಾನವರಿಗೆ ದುರ್ಲಭ ನೋಡಾ.
ಈ ಮಾಯಾ ಪ್ರಪಂಚ ನಿವೃತ್ತಿಯ ಮಾಡುವ
ಮಹದರುಹು ತಾನೆಂತಾದೋ
ಅಂತಪ್ಪ ಅರುಹುಳ್ಳ ಶರಣರಿಗೆ
ನಮೋ ನಮೋಯೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.