Index   ವಚನ - 140    Search  
 
ಹಾಲೋಗರವನುಂಡು ಬಾಲೆಯರ ತೋಳ ಮೇಲೊರಗಿದಡೆ ಬಾರದ ಭವದಲ್ಲಿ ಬಪ್ಪುದು ತಪ್ಪದು ಕಾಣಿರಣ್ಣಾ. ಅಲ್ಲಿಯ ಆಲಿಂಗನ ವಿಷ, ಚುಂಬನ ನಂಜು, ನೋಟ ಸರಳು, ಸವಿನುಡಿ ಕಠಾರಿ ನೋಡಾ.ಅಲ್ಲಿಯ ನೆನಹು ಆಜ್ಞಾನ ನೋಡಾ. ಅದು ತನ್ನ ಹಿತಶತ್ರುತನದಿಂದ ಭ್ರಾಂತುಭಾವನೆಯ ಹುಟ್ಟಿಸಿ ಕೊಲುವದಾಗಿ, ಆ ಸಂಸಾರ ನಿನಗೆ ಹಗೆಯೆಂದು ತಿಳಿಯ, ಮರುಳು ಮಾನವ. ಇದುಕಾರಣ, ಸಂಸಾರ ಸುಖವನುಣ್ಣಲೊಲ್ಲದೆ, ಬಾಲೇಂದುಮೌಳಿಯ ಜ್ಞಾನಪ್ರಸಾದವನುಂಡು ನಾನು ಬದುಕಿದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.