Index   ವಚನ - 142    Search  
 
ಮಲದ ಕುಳಿವೊಂದು ಮುಖ; ಜಲದ ಕುಳಿವೊಂದು ಮುಖ; ರಕ್ತದ ಕುಳಿವೊಂದು ಮುಖ; ಕೀವಿನ ಕುಳಿವೊಂದು ಮುಖ; ಕ್ರಿಮಿಕೀಟಜಂತುಗಳು ತುಂಬಿಪ್ಪ ಕುಳಿವೊಂದು ಮುಖ; ವಾತ ಪಿತ್ಥ ಶ್ಲೇಷ್ಮ ಸರ್ವಾಂಗದಲ್ಲಿ ತುಂಬಿ ಸರ್ವತೋಮುಖವಾಗಿಪ್ಪುದು ನೋಡಾ. ಕಿವಿಯಲ್ಲಿ ಗುಗ್ಗೆ, ಕಣ್ಣಿನಲ್ಲಿ ಜಾರು, ಮೂಗಿನಲ್ಲಿ ಸುರಿವ ಸಿಂಬಳು, ಹಲ್ಲಿನಲ್ಲಿ ಕಿನಿಕೆ, ಉರದಲ್ಲಿ ಮಾಂಸದ ಗ್ರಂಥಿ, ಒಳಗೆ ಕರುಳ ಜಾಳಿಗೆ, ಅಮೇದ್ಯದ ಹುತ್ತ, ಹೊರಗೆ ಚರ್ಮದ ಹೊದಕೆ, ಈ ಹೆಣ್ಣು ರೂಪಿನ ಬಣ್ಣದ ಕಾಯವ ಕಂಡು ಕಣ್ಣುಗೆಟ್ಟು ಮನಮುಟ್ಟಿ ಮರುಳಾದಿರಲ್ಲ. ಮುಕ್ಕಣ್ಣ, ನಿನ್ನನರಿಯದ ಬರಿಯ ಬಣ್ಣದ ಹಿರಿಯರು ಭ್ರಮೆಗೊಂಬುದ ನೋಡಿ ನಾನು ಹೇಸಿ ಕಡೆಗೆ ತೊಲಗಿದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.