Index   ವಚನ - 153    Search  
 
ಹೇಳಿಗೆಯೊಳಗಣ ಸರ್ಪ, ಈರೇಳುಲೋಕಂಗಳ ನುಂಗಿತ್ತು; ಈರೇಳುಲೋಕ ನುಂಗಿ ಕಾಳಕೂಟ ವಿಷವನೆ ಉಗುಳುತ್ತಿದೆ ನೋಡಾ. ಆ ವಿಷದ ಹೊಗೆ ಹತ್ತಿ ಎಲ್ಲಾ ಪ್ರಾಣಿಗಳು `ಪಶುಪತಿ ಪಶುಪತಿ' ಎನುತ್ತಿರಲು ವಿಷದ ಹೊಗೆ ಕೆಟ್ಟಿತ್ತು, ಹೇಳಿಗೆ ಮುರಿಯಿತ್ತು; ಈರೇಳುಲೋಕವ ನುಂಗಿದ ಸರ್ಪ ತಾನು ಸತ್ತಿತ್ತು. ಇದು ಮಾನವರು ಅರಿವುದಕ್ಕೆ ಉಪಮಾನವಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.