Index   ವಚನ - 173    Search  
 
ಗುರುದೇವನೇ ಮಹಾದೇವನು; ಗುರುದೇವನೇ ಸದಾಶಿವನು ಗುರುದೇವನೇ ಪರತತ್ವವು; ಆ ಪರಶಿವ ತಾನೆ ಗುರುರೂಪಾಗಿ ವರ್ತಿಸಿದನು, ಶಿಷ್ಯದೀಕ್ಷಾಕಾರಣ. ಆ ಶ್ರೀಗುರು, ಶಿಷ್ಯನ ಮಸ್ತಕದಲ್ಲಿ ತನ್ನ ಹಸ್ತಕಮಲವನಿರಿಸಿ, ಈ ಪ್ರಕಾರವಪ್ಪ ಲಿಂಗಕಳೆಯ ಪ್ರತಿಷ್ಠೆಯಂ ಮಾಡಿದನಾಗಿ, ಆ ಗುರುವಿನ ಹಸ್ತದಿಂದ ಆ ಕಳೆ ಹುಟ್ಟಿ, ಅದೇ ಕರಸ್ಥಲಕ್ಕೆ ಇಷ್ಟಲಿಂಗವಾಯಿತ್ತು; ಮನಸ್ಥಲಕ್ಕೆ ಪ್ರಾಣಲಿಂಗವಾಯಿತ್ತು. ಭಾವಭರಿತವಾಗಿ ಭಾವಲಿಂಗವಾಯಿತ್ತು. ಇಷ್ಟ ಪ್ರಾಣ ಭಾವವೆಂಬ ತ್ರಿವಿಧಲಿಂಗವು ತಾನೆ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗವೆಂದು ಆರು ತೆರನಾಯಿತ್ತು. ಆಚಾರಲಿಂಗದಲ್ಲಿಯೆ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ, ಮಹಾಲಿಂಗ ಈ ಲಿಂಗಪಂಚಕವು ಗರ್ಭೀಕೃತವಾಗಿ ಆಚಾರ ಲಿಂಗವೆಂದು ಕ್ರಿಯಾ ಲಿಂಗವೆಂದು ಒಂದೇ ಪರಿಯಾಯವಾಗಿ ಕ್ರಿಯಾ ಲಿಂಗವೆಂದು ಇಷ್ಟಲಿಂಗವೆಂದು ಒಂದೇ ಪರಿಯಾಯವಾಗಿ ಇಂತಿವೆಲ್ಲವನೊಳಕೊಂಡು ನಿನ್ನ ಕರಸ್ಥಲಕ್ಕೆ ಬಂದಿತ್ತು ವಸ್ತು. ಈ ಕರಸ್ಥಲದ ಮಹಾಘನದ ನಿಲವನು ಹೀಗೆಂದು ಅರಿವುದೆಂದನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.