Index   ವಚನ - 188    Search  
 
ಬ್ರಹ್ಮರಂಧ್ರದಲ್ಲಿ ಅನಾದಿ ಗಣೇಶ್ವರನೆನಿಸಿ, ಸರ್ವತೋಮುಖ[ವಾ]ಗಿಪ್ಪಿರಯ್ಯ. ಲಲಾಟದಲ್ಲಿ ಆದಿಗಣೇಶ್ವರನೆನಿಸಿಪ್ಪಿರಯ್ಯ. ಬಲದ ಕರ್ಣದಲ್ಲಿ ಆತ್ಮಗಣೇಶ್ವರನೆನಿಸಿಪ್ಪಿರಯ್ಯ. ಎಡದ ಕರ್ಣದಲ್ಲಿ ಆಧ್ಯಾತ್ಮ ಗಣೇಶ್ವರನೆನಿಸಿಪ್ಪಿರಯಾಯ್ಯ. ಬಲದ ನಯನದಲ್ಲಿ ನಿರ್ಮಾಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ನಯನದಲ್ಲಿ ನಿರ್ಮಲನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ನಾಸಿಕದಲ್ಲಿ ನಿರ್ಭಯನೆಂಬ ಗಣೇಶ್ವರನೆನೆಸಿಪ್ಪಿರಯ್ಯ. ಜಿಹ್ವೆಯಲ್ಲಿ ನಿರ್ಭಾವನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬೆನ್ನಿನಲ್ಲಿ ಪಂಚವದನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಕಂಠದಲ್ಲಿ ಜ್ಞಾನಾನಂದನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಭುಜದಲ್ಲಿ ಅಕ್ಷಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಭುಜದಲ್ಲಿ ವ್ಯೋಮಸಿದ್ಧನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ತೋಳಿನಲ್ಲಿ ಸದಾಶಿವನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ತೋಳಿನಲ್ಲಿ ಶೂಲಪಾಣಿಯೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಮುಂಗೈಯಲ್ಲಿ ಭಾಳಲೋಚನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಮುಂಗೈಯಲ್ಲಿ ಪಶುಪತಿಯೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಬರಿಯಲ್ಲಿ ಭವಹರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಬರಿಯಲ್ಲಿ ಮೃಡನೆಂಬ ಗಣೇಶ್ವರನೆನಿಸಿಪ್ಪಿರಯ್ಯ ಹೃದಯದಲ್ಲಿ ಓಂಕಾರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ನಾಭಿಯಲ್ಲಿ ಶಂಕರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಕಟಿಯಲ್ಲಿ ಮೃತ್ಯುಂಜಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ ಗುಹ್ಯದಲ್ಲಿ ಕಾಮಾಂತಕನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಗುದಸ್ಥಾನದಲ್ಲಿ ಕಾಲಾಂತಕನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ತೊಡೆಯಲ್ಲಿ ಪ್ರಮಥನಾಥನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ತೊಡೆಯಲ್ಲಿ ಮಹಾಮಹೇಶ್ವರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಮಣಿಪಾದದಲ್ಲಿ ಪಟ್ಟವರ್ಧನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಮಣಿಪಾದದಲ್ಲಿ ಚಂದ್ರಶೇಖರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಕಣಪಾದದಲ್ಲಿ ಅಖಂಡಿತನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಕಣಪಾದದಲ್ಲಿ ವ್ಯೋಮಕೇಶನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಹರಡಿನಲ್ಲಿ ಜನನ ವಿರಹಿತನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಹರಡಿನಲ್ಲಿ ವಿಶ್ವೇಶ್ವರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಮೇಗಾಲಲ್ಲಿ ಮೇಘವಾಹನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಮೇಗಾಲಲ್ಲಿ ಈಶಾನ್ಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಉಂಗುಷ್ಠದಲ್ಲಿ ಮಣಿಭೂಷಣನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಉಂಗುಷ್ಠದಲ್ಲಿ ವಿರೂಪಕ್ಷನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಆರೆಪಾದದಲ್ಲಿ ಊರ್ಧ್ವಮುಖನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಅರೆಪಾದದಲ್ಲಿ ಸಚರಾಚರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಆಧಾರಸ್ಥಾನದಲ್ಲಿ ಆಚಾರಲಿಂಗವೆನಿಸಿಪ್ಪಿರಯ್ಯ. ಸ್ವಾಧಿಷ್ಠಾನದಲ್ಲಿ ಗುರುಲಿಂಗವೆನಿಸಿಪ್ಪಿರಯ್ಯ. ಮಣಿಪೂರಕದಲ್ಲಿ ಶಿವಲಿಂಗವೆನಿಸಿಪ್ಪಿರಯ್ಯ. ಅನಾಹತದಲ್ಲಿ ಜಂಗಮಲಿಂಗವೆನಿಸಿಪ್ಪಿರಯ್ಯ. ವಿಶುದ್ಧಿಯಲ್ಲಿ ಪ್ರಸಾದಲಿಂಗವೆನಿಸಿಪ್ಪರಯ್ಯ. ಆಜ್ಞೆಯಲ್ಲಿ ಮಹಾಲಿಂಗವೆನಿಸಿಪ್ಪಿರಯ್ಯ. ಇಂತಿವೆಲ್ಲಾ ನಾಮಂಗಳನೊಳಕೊಂಡು, `ಓಂ ನಮಃ ಶಿವಾಯ ಇತಿಮಂತ್ರಂ ಸರ್ವಮಂತ್ರಾನ್ ಸ್ಥಾಪಯೇತ್. ಮಂತ್ರಮೂರ್ತಿ ಮಹಾರುದ್ರಂ, ಓಂ ಇತಿ ಜ್ಯೋತಿರೂಪಕಂ' ಎನಿಸಿಕೊಂಡು ಬಾಹ್ಯಾಭ್ಯಂತರದೊಳು ಪರಿಪೂರ್ಣವಾಗಿ ಪ್ರಕಾಶಿಸುತ್ತಿರ್ಪಿರಿಯಾಗಿ ಸರ್ವಾಂಗವು ಲಿಂಗಮಯವೆಂದರಿದು ಅಡಿಗಡಿಗೆ ಶ್ರೀ ವಿಭೂತಿಯನೆ ಧರಿಸುತಿಪ್ಪೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.