ಭಕ್ತ ಮಾಹೇಶ್ವರ ಪ್ರಸಾದಿಯೆಂದು ಈ ಮೂರು ಕ್ರಿಯಾಂಗವಯ್ಯ.
ಪ್ರಾಣಲಿಂಗಿ ಶರಣ ಐಕ್ಯವೆಂದು ಈ ಮೂರು ಜ್ಞಾನಾಂಗವಯ್ಯ.
ಆಚಾರಲಿಂಗ ಗುರುಲಿಂಗ ಶಿವಲಿಂಗವೆಂದು
ಈ ಮೂರು ಕ್ರಿಯಾಲಿಂಗವಯ್ಯ.
ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದು
ಈ ಮೂರು ಜ್ಞಾನಲಿಂಗವಯ್ಯ.
ಇವಕ್ಕೆ ಅಂಗ ಲಿಂಗ ಸಂಗ ಸಂಯೋಗನಿರ್ದೇಶವ ಹೇಳಿಹೆನು.
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು
ಆ ಆರು ಕ್ರಿಯಾಂಗವು.
ಆಚಾರಲಿಂಗ ಗುರುಲಿಂಗ ಶಿವಲಿಂಗ
ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದು
ಲಿಂಗವಾರು ತೆರನಾಗಿಪ್ಪುದಯ್ಯ.
ಇನ್ನು ಸಂಗವಾರು ತೆರನದೆಂತೆಂದಡೆ:
ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರ, ಭಾವವೆಂದು
ಸಂಗವಾರು ತೆರನಾಗಿಪ್ಪುದಯ್ಯ.
ಘ್ರಾಣದಲ್ಲಿ ಆಚಾರಲಿಂಗ, ಜಿಹ್ವೆಯಲ್ಲಿ ಗುರುಲಿಂಗ;
ನೇತ್ರದಲ್ಲಿ ಶಿವಲಿಂಗ; ತ್ವಕ್ಕಿನಲ್ಲಿ ಜಂಗಮಲಿಂಗ;
ಶ್ರೋತ್ರದಲ್ಲಿ ಪ್ರಸಾದಲಿಂಗ; ಭಾವದಲ್ಲಿ ಮಹಾಲಿಂಗ ಸಂಬಂಧ.
ಇಂತೀ ಷಂಡಗವು ಷಡ್ವಿಧಲಿಂಗದಲ್ಲಿ ಸಮರಸ ಸಂಯೋಗವಾದಲ್ಲಿ
ಅಂಗ ಲಿಂಗ ಸಂಬಂಧವೆನಿಸಿಕೊಂಡಿತಯ್ಯ.
ಇನ್ನು ಪ್ರಾಣಾಂಗವಾರು ತೆರನದೆಂತೆಂದಡೆ:
ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ, ಶುದ್ಧಾತ್ಮ
ಆ ಆರು ಪ್ರಾಣಾಂಗಗಳು.
ಇಂತೀ ಪ್ರಾಣಾಂಗಂಗಳಲ್ಲಿಯೂ ಹಿಂದೆ ಹೇಳಿದ ಷಡ್ವಿಧ ಲಿಂಗವು
ಮಾರ್ಗ ಕ್ರೀಯನೆಯ್ದಿ ಮೀರಿದ ಕ್ರಿಯಾಸ್ಥಲದಲ್ಲಿ ಬಂದು ನಿಂದು
ಜ್ಞಾನಗಮ್ಯವಾಗಿ ಸಂಗದನುವನರಿದು
ಪ್ರಾಣಾಂಗವಾರೂ ಲಿಂಗಸಂಬಂಧವಾದವಯ್ಯ.
ಹಿಂದೆ ಹೇಳಿದ ಕ್ರಿಯಾಂಗವಾರು
ಮುಂದೆ ಹೇಳುವ ಸುಚಿತ್ತಾದಿ ಭಾವಾಂತ್ಯವಹ ಜ್ಞಾನಾಂಗವಾರು.
ಈ ಉಭಯಾಂಗವು ಲಿಂಗಸಂಗದಿಂದ
ಲಿಂಗಕ್ಕೆ ಅಂಗಕ್ಕೆ ಆಶ್ರಯಸ್ಥಾನನಾಗಿ ನಿಂದ
ನಿರುಪಮ ಮಹಿಮ ಶರಣ ತಾನೆ
ಅಂಗಲಿಂಗ ಪ್ರಾಣಲಿಂಗ ಸಂಬಂಧಿಯೆನಿಸಿಕೊಂಬನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.