Index   ವಚನ - 274    Search  
 
ಪಂಚೇಂದ್ರಿಯ ಸಪ್ತಧಾತುಗಳ ಮುಟ್ಟದೆ ಸದಾಶಿವನ ಮುಟ್ಟಿಪ್ಪ ಭಕ್ತನ ಪರಿಯ ನೋಡಾ. ಕಾಮಾದಿ ಷಡುವರ್ಗಂಗಳ ಸೋಂಕದ ನಿಸ್ಸೀಮನ ಪರಿಯ ನೋಡಾ. ಗುಣತ್ರಯಂಗಳನರಿಯದ ನಿರ್ಗುಣವ ಪರಿಯ ನೋಡಾ. ಅಹಂಕಾರತ್ರಯಂಗಳನಳಿದು ತಾಪತ್ರಯಂಗಳ ನೀಗಿ ಕೋಪ ಮೋಹಾದಿಗಳ ವಿಸರ್ಜಿಸಿದ ಸದ್ಭಕ್ತನ ಪರಿಯ ನೋಡಾ. ಒಳಹೊರಗನರಿಯದೆ ನಿರಾಕುಳನಾದ ನಿಜಭಕ್ತನ ಪರಿಯ ನೋಡಾ. ನಾನೆಂಬುದ ಮರೆದು ನೀನೆಂಬುದನಳಿದು ತಾನು ತಾನಾದ ಸದ್ಭಕ್ತಂಗೆ ನಮೋನಮೋಯೆಂದು ಬದುಕಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.