Index   ವಚನ - 307    Search  
 
ಮಡಕೆಯ ತುಂಬಿ ಪಾವಡವ ಕಟ್ಟುವರಲ್ಲದೆ ಸರ್ವಾಂಗವನು ಸದಾಚಾರವೆಂಬ ಪಾವಡದಲ್ಲಿ ಕಟ್ಟುವರನಾರನೂ ಕಾಣೆನಯ್ಯ. ಬಾಯ ತುಂಬಿ ಬಿಗಿಬಿಗಿದು ಪಾವಡವ ಕಟ್ಟುವರಲ್ಲದೆ ಮನದ ಬಾಯ ಅರುಹೆಂಬ ಪಾವಡದಲ್ಲಿ ಕಟ್ಟುವರನಾರನು ಕಾಣೆನಯ್ಯ. ಮುಖ ತುಂಬಿ ಪಾವಡವ ಕಟ್ಟುವರಲ್ಲದೆ ಮೂಗು ಹೋದವರಂತೆ ಭಾವ ತುಂಬಿ ನಿರ್ವಾಣವೆಂಬ ಪಾವಡವ ಕಟ್ಟುವರನಾರನೂ ಕಾಣೆನಯ್ಯ. ಅಂಗ ಆಚಾರದಲ್ಲಿ ಸಾವಧಾನವಾಗದೆ, ಮನ ಅರುಹಿನಲ್ಲಿ ಸಾವಧಾನವಾಗದೆ, ಭಾವ ನಿರ್ವಾಣದಲ್ಲಿ ಸಾವಧಾನವಾಗದೆ, ಬರಿದೆ ಶೀಲವಂತರು ಶೀಲವಂತರೆಂದರೇನಯ್ಯ. ತನು ಮನ ಧನ ಅವಗುಣವೆಂಬ ಭವಿಯ ಕಳೆಯದೆ ಹೊರಗೆ ವ್ರತಿಗಳೆಂದರೆ ಆರು ಮಚ್ಚುವರಯ್ಯ? ಹುಚ್ಚರಿರಾ ಸುಮ್ಮನಿರಿ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. ಇವರ ಮೆಚ್ಚನು ಕಾಣಿರೋ!