Index   ವಚನ - 323    Search  
 
ಕರ್ಮೇಂದ್ರಿಯಂಗಳ ನಿರ್ಮೂಲ್ಯವ ಮಾಡಬಲ್ಲರೆ ಶರಣ. ಅರಿಷಡ್ವರ್ಗಂಗಳ ಕಡಿದು ಕತ್ತರಿಸಬಲ್ಲರೆ ಶರಣ. ಶಬ್ದಾದಿ ವಿಷಯಂಗಳ ಸಂಹರಿಸಿ, ಬುದ್ಧೀಂದ್ರಿಯಂಗಳ ಒದ್ದು ನೂಕಬಲ್ಲರೆ ಶರಣ. ಪ್ರಾಣಾದಿ ವಾಯುಗಳ ಪರಿಹರಿಸಿ, ಅಂತಃಕರಣಂಗಳ ಭ್ರಾಮಕವ ನಿವೃತ್ತಿಯ ಮಾಡಬಲ್ಲರೆ ಶರಣ. ಗುಣತ್ರಯಂಗಳನಳಿದು, ಪ್ರಣವ ಮೂಲವ ತಿಳಿದು, ತ್ರಿಣಯನನಪ್ಪಿ ಅಗಲದಿರಬಲ್ಲರೆ ಆ ಶರಣಂಗೆ ನಮೋನಮೋಯೆಂಬೆ. ಇಂತಿವನೆಲ್ಲವ ತನ್ನೊಳಗಿರಿಸಿಕೊಂಡು ತಾನೇ ಸತಿ, ಲಿಂಗವೇ ಪತಿಯಾಗಿ ಪಂಚೇಂದ್ರಿಯಂಗಳು ನಾಸ್ತಿಯಾಯಿತ್ತೆಂಬ ಪ್ರಪಂಚಿಗಳ ಮೆಚ್ಚರು ಕಾಣಾ ನಿಮ್ಮಶರಣರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.