Index   ವಚನ - 325    Search  
 
ಚಿತ್ರದ ಬೊಂಬೆ ರೂಪಾಗಿರ್ದರೇನೋ? ಅಚೇತನವಾದ ಕಾರಣ ಪ್ರಯೋಜನಕಾರಿಯಾದುದಿಲ್ಲ. ಹಾವುಮೆಕ್ಕೆಯ ಹಣ್ಣು ನುಂಪಾಗಿರ್ದರೇನೋ? ಕಹಿ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ. ಅತ್ತಿಯ ಹಣ್ಣು ಕಳಿತಿರ್ದರೇನೋ? ಕ್ರಿಮಿ ಬಿಡದ ಕಾರಣ ಪ್ರಯೋಜನಕಾರಿಯಾದುದಿಲ್ಲ. ತಿಪ್ಪೆಯ ಹಳ್ಳ ತಿಳಿದಿರ್ದರೇನೋ? ಅಮೇಧ್ಯ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ. ವೇದ ಶಾಸ್ತ್ರ ಪುರಾಣಾಗಮಂಗಳನೋದಿ ಎಲ್ಲರಲ್ಲಿಯೂ ಅನುಭಾವಿಗಳಾದರೇನೋ? ಆಶೆಯೆಂಬ ಪಾಶದಲ್ಲಿ ಕಟ್ಟುವಡೆದು ಪಾಶಬದ್ಧರಾದ ಕಾರಣ ಪ್ರಯೋಜನಕಾರಿಗಳಾದುದಿಲ್ಲ. ನುಡಿವಂತೆ ನಡೆಯದವರ ನಡೆದಂತೆ ನುಡಿಯದವರ ಎಂತು ಶಿವಶರಣರೆಂಬೆ ವಾಚಾಳಿಕರ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.