Index   ವಚನ - 326    Search  
 
ಪುರಜನಂಗಳ ಮೆಚ್ಚಿಸುವಾಗ ಪುರುಷಾರ್ಥಿಯೆ ಶರಣ? ಪರಿಜನಂಗಳ ಮೆಚ್ಚಿಸುವಾಗ ಪಾದರಗಿತ್ತಿಯೆ ಶರಣ? ಸರ್ವರ ಮೆಚ್ಚಿಸುವಾಗ ಸಂತೆಯ ಸೂಳೆಯೇ ಶರಣ? ತನ್ನ ಲಿಂಗದ ನಚ್ಚು ಮಚ್ಚು ಪರಬ್ರಹ್ಮದಚ್ಚು. ನಿಂದಕರ ಸುಡುವ ಎದೆಗಿಚ್ಚು ನೋಡಾ. ಕೆಂಡವ ಕೊಂಡು ಮಂಡೆಯ ತುರಿಸುವಂತೆ ಕೆಂಡಗಣ್ಣನ ಶರಣರ ಇರವನರಿಯದೆ ದೂಷಣೆಯ ಮಾಡುವ ನರಕಿಜೀವಿಗಳ ನರಕದಲ್ಲಿಕ್ಕದೆ ಮಾಬನೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.