Index   ವಚನ - 363    Search  
 
ಅಂಗಲಿಂಗ ಸಂಬಂಧದ ನಿಲುಕಡೆಯನರಿಯದೆ ಅಘೋರತಪವ ಮಾಡಿದರೇನು? ಗಾಳಿಯಾಹಾರವ ಕೊಂಡರೇನು? ತರಗೆಲೆಯ ಮೆದ್ದರೇನು? ಗಿರಿಗಹ್ವರದೊಳಗಿದ್ದರೇನು? ಅಂಗಲಿಂಗಸಂಬಂಧಿಗಳಾಗಬಲ್ಲರೆ. ಅಂಗಲಿಂಗಸಂಗಂದಿಂದಲ್ಲದೆ, ಅಂತರಂಗದಲ್ಲಿ ಅರುಹು ತಲೆದೋರದು. ಅಂತರಂಗದಲ್ಲಿ ಅರುಹು ತಲೆದೋರಿದಲ್ಲದೆ, ಆತ್ಮಲಿಂಗದ ಆದ್ಯಂತವನರಿಯಬಾರದು. ಆತ್ಮಲಿಂಗದ ಆದ್ಯಂತವನರಿಯದೆ ಅಘೋರ ತಪವಮಾಡಿದರೆ ಅದೇತಕ್ಕೂ ಪ್ರಯೋಜನವಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.