ವಚನ - 1397     
 
ಭಕ್ತ ಮಾಡಿಹನೆಂಬಿರಿ, ಭಕ್ತ ಮಾಡಿಹನೆಂಬಿರಿ, ಭಕ್ತ ಮಾಡಿಹನೆಂದು ಗೆಗ್ಗೆವಾಯ್ದುಕೊಳ್ಳಲಾಗದು. ಅದೇಕೆಂದಡೆ: ಭಕ್ತನು ಅಸ್ತಿ ನಾಸ್ತಿ ಅರಿಯದನ್ನಕ್ಕ, ಉಂಟು ಇಲ್ಲವೆಂದು ತಿಳಿಯದನ್ನಕ್ಕ ಮಾಡಿತ್ತೇ ಗೆಲ್ಲ ಎಂದುಕೊಂಡಡೆ, ಆ ಸುಳುಹಿಂಗೆ ಭಂಗ. ತೂಳವೆತ್ತಿದಾತನು ಇರಿದುಕೊಂಬುದು, ಭೂತದ ಗುಣವಲ್ಲದೆ ವೀರದ ಗುಣವಲ್ಲ. ಸ್ವೇಚ್ಛಾತುರದ ಮಾಟವೊ? ಮುಕ್ತ್ಯಾತುರದ ಮಾಟವೊ? ರಿಣಾತುರದ ಮಾಟವೊ? ಎಂಬುದ ತಿಳಿಯಬೇಕಲ್ಲದೆ ಕೊಂಡುದೆ ಕೋಳಾಗಿ ಹೋಹನ್ನಕ್ಕರ ಜಂಗಮಲಕ್ಷಣವಲ್ಲ. ತುಂಬಿದ ಬಂಡಿಯ ಹಾರವನರಿದು ನಡೆಸುವನ ಜಾಣಿಕೆಯಂತಿರಬೇಡಾ ಲಿಂಗಜಾಣರು? ಸ್ವೇಚ್ಛಾತುರವನಾಚರಿಸುವ ಜಂಗಮಕ್ಕೆ ಭವಂ ನಾಸ್ತಿ ಮುಕ್ತ್ಯಾತುರವನಾಚರಿಸುವ ಜಂಗಮಕ್ಕೆ ಭವ ಹಿಂಗದು. ರಿಣಾತುರವನಾಚರಿಸುವ ಜಂಗಮಕ್ಕೆ ಯಮದಂಡನೆ. ಹರಿದು ಬರಲಿ ಕಿತ್ತು ಬರಲಿ ಅವನೇನಾದರೂ ಆಗಲಿ, ನಾನು ತೆಕ್ಕೊಂಡು ಹೋದೆನೆಂಬನ್ನಕ್ಕರ ಜಂಗಮಲಕ್ಷಣವಲ್ಲ. ಜಂಗಮ ಕರುಣರಸಭರಿತನಾಗಿ, ಭಕ್ತನಲ್ಲಿ ಜಂಗಮದಲ್ಲಿ ಭಾವಭೇದವಿಲ್ಲಾಗಿ. ಇಂತೀ ಕ್ರಮಾದಿಕ್ರಮಂಗಳನರಿದು ಸುಳಿಯದಿದ್ದಡೆ ನಿರ್ವಯಲಸ್ಥಲಕ್ಕೆ ದೂರ ಕಾಣಾ ಗುಹೇಶ್ವರಾ.