ಇನ್ನೀ ಲಿಂಗಮುಖಕ್ಕೆ ಅರ್ಪಿಸುವ ಅವಧಾನವಾವುದೆಂದೊಡೆ:
ಪೃಥ್ವಿಯೇ ಅಂಗವಾದ ಭಕ್ತನು ಸುಚಿತ್ತವೆಂಬ ಹಸ್ತದಿಂದ
ಆಚಾರಲಿಂಗಕ್ಕೆ
ಘ್ರಾಣವೆಂಬ ಮುಖದಲ್ಲಿ ಗಂಧವ ಸಮರ್ಪಣವ ಮಾಡಿ
ಆಚಾರಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ.
ಜಲವೇ ಅಂಗವಾದ ಮಾಹೇಶ್ವರನು ಸುಬುದ್ಧಿಯೆಂಬ ಹಸ್ತದಿಂದ
ಗುರುಲಿಂಗಕ್ಕೆ
ಜಿಹ್ವೆಯೆಂಬ ಮುಖದಲ್ಲಿ ರಸವನು ಸಮರ್ಪಣವ ಮಾಡಿ
ಗುರುಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ.
ಅಗ್ನಿಯೇ ಅಂಗವಾದ ಪ್ರಸಾದಿಯು ನಿರಹಂಕಾರವೆಂಬ ಹಸ್ತದಿಂದ
ಶಿವಲಿಂಗಕ್ಕೆ
ನೇತ್ರವೆಂಬ ಮುಖದಲ್ಲಿ ರೂಪವ ಸಮರ್ಪಣವ ಮಾಡಿ
ಶಿವಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ.
ವಾಯುವೇ ಅಂಗವಾದ ಪ್ರಾಣಲಿಂಗಿಯು
ಸುಮನವೆಂಬ ಹಸ್ತದಿಂದ ಜಂಗಮಲಿಂಗಕ್ಕೆ
ತ್ವಕ್ಕೆಂಬ ಮುಖದಲ್ಲಿ ಸ್ಫರ್ಶನ ಸಮರ್ಪಣವಮಾಡಿ
ಜಂಗಮಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ.
ಆಕಾಶವೇ ಅಂಗವಾದ ಶರಣನು ಸುಜ್ಞಾನವೆಂಬ ಹಸ್ತದಿಂದ
ಪ್ರಸಾದಲಿಂಗಕ್ಕೆ
ಶ್ರೋತ್ರವೆಂಬ ಮುಖದಲ್ಲಿ ಶಬ್ದವ ಸಮರ್ಪಣವ ಮಾಡಿ
ಪ್ರಸಾದಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ.
ಆತ್ಮನೇ ಅಂಗವಾದ ಐಕ್ಯನು ಸದ್ಭಾವವೆಂಬ ಹಸ್ತದಿಂದ
ಮಹಾಲಿಂಗಕ್ಕೆ
ಮನೆವೆಂಬ ಮುಖದಲ್ಲಿ ತೃಪ್ತಿಯ ಸಮರ್ಪಣವ ಮಾಡಿ
ಮಹಾಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ.
ಈ ಅರ್ಪಿತ ಅವಧಾನದ ಭೇದವನರಿದು
ಭೋಗಿಸುವ ಭೋಗವಲ್ಲವು
ಲಿಂಗಭೋಗ ಪ್ರಸಾದ, ಅಂಗಭೋಗ ಅನರ್ಪಿತ;
ಅನಪಿರ್ತವೇ ಕರ್ಮದ ತವರುಮನೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನೊಮ್ಮೆಯೂ ಮುಟ್ಟವು.
Art
Manuscript
Music
Courtesy:
Transliteration
Innī liṅgamukhakke arpisuva avadhānavāvudendoḍe:
Pr̥thviyē aṅgavāda bhaktanu sucittavemba hastadinda
ācāraliṅgakke
ghrāṇavemba mukhadalli gandhava samarpaṇava māḍi
ācāraliṅgada prasanna prasādava svīkarisuttippanayya.
Jalavē aṅgavāda māhēśvaranu subud'dhiyemba hastadinda
guruliṅgakke
jihveyemba mukhadalli rasavanu samarpaṇava māḍi
guruliṅgada prasanna prasādava svīkarisuttippanayya.
Agniyē aṅgavāda prasādiyu nirahaṅkāravemba hastadinda
Śivaliṅgakke
nētravemba mukhadalli rūpava samarpaṇava māḍi
śivaliṅgada prasanna prasādava svīkarisuttippanayya.
Vāyuvē aṅgavāda prāṇaliṅgiyu
sumanavemba hastadinda jaṅgamaliṅgakke
tvakkemba mukhadalli spharśana samarpaṇavamāḍi
jaṅgamaliṅgada prasanna prasādava svīkarisuttippanayya.
Ākāśavē aṅgavāda śaraṇanu sujñānavemba hastadinda
prasādaliṅgakke
śrōtravemba mukhadalli śabdava samarpaṇava māḍi
prasādaliṅgada prasanna prasādava svīkarisuttippanayya.
Ātmanē aṅgavāda aikyanu sadbhāvavemba hastadinda
mahāliṅgakke
manevemba mukhadalli tr̥ptiya samarpaṇava māḍi
mahāliṅgada prasanna prasādava svīkarisuttippanayya.
Ī arpita avadhānada bhēdavanaridu
bhōgisuva bhōgavallavu
liṅgabhōga prasāda, aṅgabhōga anarpita;
anapirtavē karmada tavarumane,
mahāliṅgaguru śivasid'dhēśvara prabhuvanom'meyū muṭṭavu.
ಸ್ಥಲ -
ಪ್ರಾಣಲಿಂಗಿಯ ಪ್ರಸಾದಿ