Index   ವಚನ - 418    Search  
 
ಪೃಥ್ವಿ, ಸುಚಿತ್ತ, ಘ್ರಾಣ, ಗಂಧ, ಪಾಯ್ವಿಂದ್ರಿಯ ಇವು ಭಕ್ತನಂಗ ಮುಖಂಗಳು. ಆ ಭಕ್ತಂಗೆ ಆಚಾರಲಿಂಗವೇ ಪ್ರಾಣವಾಗಿಪ್ಪುದಯ್ಯ. ಅಪ್ಪು, ಸುಬುದ್ಧಿ, ಜಿಹ್ವೆ, ರಸ, ಗುಹ್ಯ ಈ ಐದು ಮಹೇಶ್ವರನ ಅಂಗಮುಖಂಗಳು, ಆ ಮಹೇಶ್ವರಂಗೆ ಗುರುಲಿಂಗವೇ ಪ್ರಾಣವಾಗಿಪ್ಪುದಯ್ಯ. ಅಗ್ನಿ, ನಿರಹಂಕಾರ, ನೇತ್ರ, ರೂಪು, ಪಾದ ಈ ಐದು ಪ್ರಸಾದಿಯ ಅಂಗಮುಖಂಗಳು. ಆ ಪ್ರಸಾದಿಗೆ ಶಿವಲಿಂಗವೇ ಪ್ರಾಣಲಿಂಗವಾಗಿಪ್ಪುದಯ್ಯ. ವಾಯು, ಸುಮನ, ತ್ವಕ್ಕು, ಸ್ಪರ್ಶನ, ಪಾಣಿ ಈ ಐದು ಪ್ರಾಣಲಿಂಗಿಯ ಅಂಗಮುಖಂಗಳು. ಆ ಪ್ರಾಣಲಿಂಗಿಗೆ ಜಂಗಮಲಿಂಗವೇ ಪ್ರಾಣವಾಗಿಪ್ಪುದಯ್ಯ. ಆಕಾಶ, ಸುಜ್ಞಾನ, ಶ್ರೋತ್ರ, ಶಬ್ದ, ವಾಕು ಈ ಐದು ಶರಣನ ಅಂಗಮುಖಂಗಳು. ಆ ಶರಣನಿಗೆ ಪ್ರಸಾದಲಿಂಗವೇ ಪ್ರಾಣವಾಗಿಪ್ಪುದಯ್ಯ. ಆತ್ಮ, ಸದ್ಭಾವ, ಮನ, ನೆನಹು, ಪರಿಣಾಮ ಈ ಐದು ಐಕ್ಯನ ಅಂಗಮುಖಂಗಳು. ಆ ಐಕ್ಯಂಗೆ ಮಹಾಲಿಂಗವೇ ಪ್ರಾಣವಾಗಿಪ್ಪುದಯ್ಯ. ಇಂತೀ ಅಂಗಮುಖವನರಿದು ಲಿಂಗಮುಖವ ಮಾಡಬಲ್ಲರೆ ಪ್ರಸಾದಿಯೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.