Index   ವಚನ - 463    Search  
 
ಜಂಗಮ ಜಂಗಮವೆಂದರೇನೋ ಲಜ್ಜಾಭಂಡರಿರಾ? ಜಂಗಮವಂತೆ ಕಳಂಕಿಯೇ? ಅಪೇಕ್ಷಿಯೇ? ಅಶಕ್ತನೇ? ಪಾಶಜೀವಿಗಳ[ನೆ] ಂತು ಜಂಗಮವೆಂಬೆನಯ್ಯ? ಜಂಗಮವೇನು ದೋಷಿಯೇ? ದುರ್ಗುಣಿಯೇ? ಅಸತ್ಯನೇ? ಅನಾಚಾರಿಯೇ? ಅಲ್ಲ ಕಾಣಿರಯ್ಯ. ಹೇಳಿ[ಹೆನು] ಕೇಳಿ ನಿಃಕಳಂಕ, ನಿರಪೇಕ್ಷ, ನಿರಾಶಕ, ನಿರ್ದೋಷಿ, ನಿಃಪುರುಷ; ಸತ್ಯ, ದಯೆ, ಕ್ಷಮೆ, ದಮೆ, ಶಾಂತಿ, ಸೈರಣೆ, ಸಮಾಧಾನ ಸಂತೋಷ ಪರಿಣಾಮಿ. ನುಡಿ ತತ್ವ ; ನಡೆ ಪಾವನ; ಸುಳುಹು ವಸಂತಗಾಳಿ. ಜಗದಾರಾಧ್ಯ, ಸ್ವಯ ಸ್ವತಂತ್ರ ಚರ ಪರಿಣಾಮಿ ಪರಿಪೂರ್ಣ ಪ್ರಕಾಶ. ಸರ್ವತತ್ವಾಶ್ರಯ. ಶೂನ್ಯ ನಿಶ್ಯೂನ್ಯ ನಿರಾಳನೇ ಜಂಗಮದೇವ ಕಾಣಿರೋ, ಕೇಳಿ[ರಯ್ಯ], ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನ ಘನವ!