Index   ವಚನ - 533    Search  
 
ಗುರುಮುಖದಿಂದ ಕೊಂಬುದು ಶುದ್ಧಪ್ರಸಾದ. ಲಿಂಗಮುಖದಿಂದ ಕೊಂಬುದು ಸಿದ್ಧಪ್ರಸಾದ. ಜಂಗಮಮುಖದಿಂದ ಕೊಂಬುದು ಪ್ರಸಿದ್ಧಪ್ರಸಾದ. ಜ್ಞಾನಮುಖದಿಂದ ಕೊಂಬುದು ಮಹಾಪ್ರಸಾದ. ಈ ನಾಲ್ಕು ತೆರದಲ್ಲಿ ಕೊಂಬುವುದು ಪ್ರಸಾದವಲ್ಲದೆ ರಣದ ಬೀರರ ಹಾಂಗೆ ಬಾಚಿಸಿಕೊಂಡು ಕೊಂಬಷ್ಟ ಕೊಂಡು, ಬಿಡುವಷ್ಟ ಬಿಟ್ಟು ಸೂರೆಗೂಳಾಗಿ ಚೆಲ್ಲಿಯಾಡುವುದು ಇದಾವ ಪ್ರಸಾದ ಹೇಳ? ಅದೆಂತೆಂದೊಡೆ: ಅಣುಮಾತ್ರ ಪ್ರಸಾದಾನ್ನಂ ತ್ಯಕ್ತ್ವಾ ಭುಕ್ತಾನ್ನ ಕಿಲ್ಬಿಷಂ| ಸ ಪಾಪೀ ನರಕಂ ಯಾತಿ ತದ್ಗೃಹಂ ನರಕಾಲಯಂ|| ಎಂದುದಾಗಿ ಬಹು ಜನಂಗಳು ಕಾರಿದ ಕೂಳ ಶ್ವಾನ ಭುಂಜಿಸಿ ತನ್ನೊಡಲ ಹೊರೆದಂತಾಯಿತ್ತು ಕಾಣಾ ವಿಶ್ವಾಸವಿಲ್ಲದ ಪ್ರಸಾದ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.