Index   ವಚನ - 534    Search  
 
ನೀ ಹುಟ್ಟಿದೆಯಯ್ಯ ಗುರುವಿನ ಮನಸ್ಥಲದಲ್ಲಿ. ನಾ ಹುಟ್ಟಿದೆನಯ್ಯ ಗುರುವಿನ ಕರಸ್ಥಲದಲ್ಲಿ. ಇದು ಕಾರಣ: ನನ್ನ ಅಂಗವ ಮಾಡಿ, ನಿನ್ನ ಪ್ರಾಣವ ಮಾಡಿ ಪ್ರಾಣಲಿಂಗಪ್ರತಿಷ್ಠೆಯ ಮಾಡಿದನಯ್ಯ ಶ್ರೀಗುರು. ಆ ಗುರುವಿನ ಪ್ರಸನ್ನ ಪ್ರಸಾದದಿಂದ, ನಾನು ನೀನು ಹುಟ್ಟಿದೆವಾಗಿ, ಎನಗೂ ನಿನಗೂ ಗುರುಪ್ರಸಾದವೇ ಪ್ರಾಣ ನೋಡಾ. ಇದುಕಾರಣ: ಗುರುಪ್ರಸಾದವ, ಎಲೆ ಲಿಂಗವೆ ನೀನು ಕೊಳಲೇಬೇಕು. ಗುರುಪ್ರಸಾದವ, ಕೊಳದಿದ್ದರೆ ನೀ ಲಿಂಗವಲ್ಲ ನೋಡಾ. ಪ್ರಸಾದವಿಲ್ಲದ ಲಿಂಗಕ್ಕೆ ದೇವತ್ವವೆಲ್ಲಿಯದು? ದೇವತ್ವವಿಲ್ಲದುದು ಪೂಜೆಗೆ ಸಲುವುದೆ? ಪೂಜೆಗೆ ಸಲ್ಲದೆಂದೆನು ಕಾಣಾ ಎಲೆ ಶಿವನೆ ನೀ ಸಾಕ್ಷಿಯಾಗಿ. ಇದು ಕಾರಣ: ಗುರುಪ್ರಸಾದವ ನಾನು ಕೊಳ್ಳಲೇಬೇಕು. ಆ ಗುರುಪ್ರಸಾದವ ಕೊಳ್ಳದಿದ್ದರೆ ನಾನು ಪ್ರಸಾದಿಯಲ್ಲ ನೋಡಾ. ಇದುಕಾರಣ: ನಾನೂ ನೀನೂ ಗುರುಪ್ರಸಾದಿಗಳು ಕಾಣಾ. ಕೇಳು: ಗುರಮಂತ್ರೋಪದೇಶದಿಂದ ಹುಟ್ಟಿದ ಲಿಂಗಕ್ಕೆ ಗುರುಪ್ರಸಾದವ ಕೊಡಬಾರದು ಎಂಬ ಅನಾಚಾರಿಗಳಿಗೆ ನಾಯಕನರಕ ತಪ್ಪದು ನೋಡಾ. `ಏವಂ ಭೇದ ಕಲಾದೇವಿ ಸದ್ಗುರುಶ್ಯಿಷ್ಯ ಮಸ್ತಕೇ| ಹಸ್ತಾಬ್ಜ ಮಥನಾದ್ ಗ್ರಾಹ್ಯಾ ತಸ್ಯ ಭಾವ ಕರೋದಿತಾ ವಪುರೇವ ಸಮುತ್ಪನ್ನಾ ತತ್ಪ್ರಾಣ ಮಿಶ್ರಿತಾ ಭವೇತ್| ಯಥಾ ಗುರು ಕರೇ ಜಾತಂ ಲಿಂಗಂ ಭಕ್ತಿ ವಿಭೇದತಃ||' ಎಂದುದಾಗಿ ಗುರುಪ್ರಸಾದ ಎನಗೂ ನಿನಗೂ ಪ್ರಾಣಪ್ರತಿಷ್ಠೆಯೆಂದನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.