Index   ವಚನ - 624    Search  
 
ಚಂದ್ರನಿಂದಾದ ಕಲೆ ಚಂದ್ರನಬೆರಸಿ ಚಂದ್ರನಾದಂತೆ, ಸೂರ್ಯನಿಂದಾದ ಕಿರಣ ಸೂರ್ಯನ ಬೆರಸಿ ಸೂರ್ಯನಾದಂತೆ, ಅಗ್ನಿಯಿಂದಾದ ಕಾಂತಿ ಅಗ್ನಿಯನೆ ಬೆರಸಿ ಅಗ್ನಿಯಾದಂತೆ, ದೀಪದಿಂದಾದ ಬೆಳಗು ದೀಪವನೆ ಬೆರಸಿ ದೀಪವಾದಂತೆ, ಸಮುದ್ರದಿಂದಾದ ನದಿ ಸಮುದ್ರವನೆ ಬೆರಸಿ ಸಮುದ್ರವಾದಂತೆ, ಪರಶಿವತತ್ವದಲ್ಲಿಯೆ ನಾನುದಯಿಸಿ ಆ ಪರಶಿವತತ್ವದಲ್ಲಿಯೆ ಬೆರಸಿ ಪರಶಿವಯೋಗಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.