ಆಚಾರಲಿಂಗ ಸಂಬಂಧಿಯಾದ ಬಳಿಕ
ಪಂಚಭೂತದ ಪ್ರಕೃತಿಕಾಯ ಅಳಿದಿರಬೇಕಯ್ಯ.
ಗುರುಲಿಂಗ ಸಂಬಂಧಿಯಾದ ಬಳಿಕ
ಪಂಚವಿಷಯಂಗಳ ಸಂಚವಂಚನೆಯ ಕೆಡಿಸಿರಬೇಕಯ್ಯ.
ಶಿವಲಿಂಗ ಸಂಬಂಧಿಯಾದ ಬಳಿಕ
ಮಾಯಾಕರ್ಮೇಂದ್ರಿಯದ ಕುಹಕವಳಿದಿರಬೇಕಯ್ಯ.
ಜಂಗಮಲಿಂಗ ಸಂಬಂಧಿಯಾದ ಬಳಿಕ
ಬುದ್ಧೀಂದ್ರಿಯಂಗಳ ಶುದ್ಧಿಯಿಂದಿರಬೇಕಯ್ಯ.
ಪ್ರಸಾದಲಿಂಗ ಸಂಬಂಧಿಯಾದ ಬಳಿಕ
ಅಂತಃಕರಣಚತುಷ್ಟಯ, ಸತ್ವರಜತಮಂಗಳ
ಪ್ರವರ್ತನೆಯ ಮೆಟ್ಟಿ ಮುರಿದಿರಬೇಕಯ್ಯ.
ಮಹಾಲಿಂಗ ಸಂಬಂಧಿಯಾದ ಬಳಿಕ
ಷಡುವರ್ಣ ಧಾತುವನಳಿದು
ವಸ್ತು ರೂಪಾಗಿ ಶುದ್ಧ ನಿರ್ಮಲನಾಗಿ
ತನುತ್ರಯ ಜೀವತ್ರಯ ಅವಸ್ಥಾತ್ರಯ ಪ್ರಕೃತಿತ್ರಯ
ಇಂತೀ ನಾನಾವಿಧಂಗಳನೆಲ್ಲವನು ಒಂದು ಮಾಡಿ
ನಾನು ನೀನೆಂಬುಭಯವಿಲ್ಲದೆ
ಜೀವ ಪರಮೈಕ್ಯವಪ್ಪ ಪರಾಪರವೆ ತಾನಾಗಿರಬೇಕಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.