Index   ವಚನ - 700    Search  
 
ಗಮನವುಳ್ಳನ್ನಕ್ಕರ ನಿರ್ಗಮನವುಂಟು. ಗಮನ ನಿರ್ಗಮನವುಳ್ಳನ್ನಕ್ಕರ ಸ್ಥಲ ಕುಳವುಂಟು. ಸ್ಥಲ ಕುಳವುಳ್ಳನ್ನಕ್ಕರ ಸೋಹ ದಾಸೋಹಮುಂಟು. ಸೋಹ ದಾಸೋಹವುಳ್ಳನ್ನಕ್ಕರ ಜ್ಞಾನಾಚಾರವುಂಟು. ಜ್ಞಾನಾಚಾರವುಳ್ಳನ್ನಕ್ಕರ ತಾನಿದಿರುಂಟು. ಗಮನ ನಿರ್ಗಮನ ನಾಸ್ತಿಯಾದರೆ ಸ್ಥಲ ಕುಳನಾಸ್ತಿ. ಸ್ಥಲ ಕುಳನಾಸ್ತಿಯಾದರೆ ಸೋಹ ದಾಸೋಹ ನಾಸ್ತಿ ಸೋಹ ದಾಸೋಹ ನಾಸ್ತಿಯಾದರೆ ಜ್ಞಾನಾಚಾರ ನಾಸ್ತಿ. ಜ್ಞಾನಾಚಾರ ನಾಸ್ತಿಯಾದರೆ ನಾ ನೀನೆಂಬುದು ನಾಸ್ತಿ. ನಾ ನೀನೆಂಬುದು ನಾಸ್ತಿಯಾದಲ್ಲಿ ಸವಿಕಲ್ಪ ನಿರ್ವಿಕಲ್ಪ ನಾಸ್ತಿ. ಸವಿಕಲ್ಪ ನಿರ್ವಿಕಲ್ಪ ನಾಸ್ತಿಯಾದಲ್ಲಿ ಆದ್ಯರೆನಲಿಲ್ಲ, ವೇದ್ಯರೆನಲಿಲ್ಲ, ಸಾಧ್ಯರೆನಲಿಲ್ಲ, ಏನೂ ಏನೂ ಇಲ್ಲದ ಸರ್ವಶೂನ್ಯ ನಿರಾಲಂಬವು ನಿರ್ವಯಲಪದವು; ಆವ ಆವರಣವೂ ಹೊದ್ದದ ಪರಮಾನಂದ ಪದವು ಇದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.