ವಚನ - 1436     
 
ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ಕರ್ತನಟ್ಟಿದನಯ್ಯಾ ಒಬ್ಬ ಶರಣನ! ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ ರುದ್ರಗಣ ಪ್ರಮಥಗಣಂಗಳೆಲ್ಲರ ಹಿಡಿತಂದು ಅಮರಗಣಂಗಳೆಂದು ಹೆಸರಿಟ್ಟು ಕರೆದು, ಅಗಣಿತಗಣಂಗಳೆಲ್ಲರ ಹಿಡಿತಂದು, ಅಸಂಖ್ಯಾತರೆಂಬ ಹೆಸರಿಟ್ಟು ಕರೆದು, ಭಕ್ತಿಯ ಕುಳಸ್ಥಲವ ಶ್ರುತದೃಷ್ಟಪವಾಡದಿಂದ ಮರೆದು ತೋರಿ, ಜಗವರಿಯಲು ಶಿವಾಚಾರವ ಧ್ವಜವನೆತ್ತಿಸಿ ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಿಣಿಗೆಯಾದನು. ಆ ಶಿವಶರಣನ ಮನೆಯೊಳಗಿಪ್ಪ ಶಿವಗಣಂಗಳ ತಿಂಥಿಣಿಯ ಕಂಡು, ಎನ್ನಮನ ಉಬ್ಬಿಕೊಬ್ಬಿ ಓಲಾಡುತ್ತಿದ್ದೆನಯ್ಯಾ! ನಮ್ಮ ಗುಹೇಶ್ವರನ ಶರಣ ಸಂಗನಬಸವಣ್ಣನ ದಾಸೋಹದ ಘನವನೇನೆಂದೆನಬಹುದು ನೋಡಾ ಸಿದ್ಧರಾಮಯ್ಯಾ.