Index   ವಚನ - 73    Search  
 
ಅಂಗೇಂದ್ರಿಯ ಕರಣ ಹರಣದಲ್ಲಿ ಲಿಂಗವ ಧರಿಸಿ ಲಿಂಗಾಂಗಿಯಾದನಯ್ಯ ನಿಮ್ಮ ಶರಣ. ಅದೆಂತೆಂದಡೆ: ಘ್ರಾಣದಲ್ಲಿ ಲಿಂಗವ ಧರಿಸಿದನಾಗಿ, ಘ್ರಾಣ ಲಿಂಗದ ಘ್ರಾಣವಾಯಿತ್ತು. ಜಿಹ್ವೆಯಲ್ಲಿ ಲಿಂಗವ ಧರಿಸಿದನಾಗಿ, ಜಿಹ್ವೆ ಲಿಂಗದ ಜಿಹ್ವೆಯಾಯಿತ್ತು. ನೇತ್ರದಲ್ಲಿ ಲಿಂಗವ ಧರಿಸಿದನಾಗಿ, ನೇತ್ರ ಲಿಂಗದ ನೇತ್ರವಾಯಿತ್ತು. ತ್ವಕ್ಕಿನಲ್ಲಿ ಲಿಂಗವ ಧರಿಸಿದನಾಗಿ, ತ್ವಕ್ಕು ಲಿಂಗದ ತ್ವಕ್ಕಾಯಿತ್ತು. ಶ್ರೋತ್ರದಲ್ಲಿ ಲಿಂಗವ ಧರಿಸಿದನಾಗಿ, ಶ್ರೋತ್ರ ಲಿಂಗದ ಶ್ರೋತ್ರವಾಯಿತ್ತು. ಮನದಲ್ಲಿ ಲಿಂಗವ ಧರಿಸಿದನಾಗಿ, ಮನ ಲಿಂಗದ ಮನವಾಯಿತ್ತು. ಸರ್ವಾಂಗದಲ್ಲಿ ಲಿಂಗವ ಧರಿಸಿದನಾಗಿ, ಸರ್ವಾಂಗಲಿಂಗವಾಯಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣಂಗೆ.